ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಖಂಡನೆ

000000
Published on

ಕಾನೂನು ಕ್ರಮಕ್ಕೆ ಬಿಜೆಪಿ ಪಟ್ಟು

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಾಗೂ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಕಾಂಗ್ರೆಸ್ ನಾಯಕ ಐವಾನ್ ಡಿಸೋಜರ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಘನತೆ ಅರಿಯದ ಕಾಂಗ್ರೆಸ್ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಹಾದಿ ಬೀದಿಯಲ್ಲಿ ಅವರ ಪ್ರತಿಕೃತಿ ಸುಡುವಂತಹ ಕೃತ್ಯಕ್ಕೆ ಇಳಿದಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಮೇಲೆ ಬಂದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿರುವ ಅಧಿಕಾರ, ಇದು ಹಿಂದೆಯೂ ನಡೆದಿದೆ. ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಡನೆ ಸಮಾಲೋಚಿಸಿ, ಪ್ರಕರಣದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಪರಾಮರ್ಶಿಸಿ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ನಡೆ ಖಂಡಿಸುವುದು, ಅವರ ಪ್ರತಿಕೃತಿ ಸುಡುವುದು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನ. ಇಂತಹ ಕೃತ್ಯಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳ ಮೇಲೆ ಕಾನೂನು ರೀತಿಯ ಕ್ರಮ ಪೊಲೀಸ್ ಇಲಾಖೆ ಕೈಗೊಳ್ಳಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net