ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ 19ಕ್ಕೆ

Congress
Published on

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಆ. 19ರಂದು ಬೆಳಗ್ಗೆ 11ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರು ಜನಪರ ಆಡಳಿತಕ್ಕೆ ಮುಂದಾಗಿ ಜನ ಮೆಚ್ಚುಗೆ ಗಳಿಸಬೇಕೆ ಹೊರತು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಂಡಿರುವುದು ಸರಿಯಲ್ಲ. ಹೀಗಾಗಿ ಅವರನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ ಎಂದರು.

ಸಿಎಂ ಪತ್ನಿಗೆ ತವರಿನ ಉಡುಗೊರೆಯಾಗಿ ಬಂದಿದ್ದನ್ನು ಮೂಡಾ ಸ್ವಾಧೀನ ಪಡಿಸಿಕೊಂಡಿದ್ದರಿಂದ 50:50 ಅನುಪಾತದಲ್ಲಿ ನಿವೇಶನ ಹಂಚಿದೆ. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ನೀಡಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನು ಎಂದು ಪ್ರಶ್ನಿಸಿದರು.

ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಕೇಂದ್ರ ಸರ್ಕಾರ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದುರ್ಬಲಗೊಳಿಸಲು ವಾಮಮಾರ್ಗದ ಮೂಲಕ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಮೂಡಾ ಪ್ರಕರಣದ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಆದರೆ, ಪ್ರಾಸಿಕ್ಯೂಷನ್‌ಗೆ ನೀಡಿರುವುದರ ಹಿಂದೆ ಕುತಂತ್ರವಿದೆ ಎಂದು ದೂರಿದರು.

ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧವೂ ಸಾಕಷ್ಟು ಆರೋಪಗಳಿವೆ. ಹಾಗಂತ ಎಲ್ಲವನ್ನೂ ಪ್ರಾಸಿಕ್ಯೂಷನ್‌ಗೆ ಕೊಡಲು ಸಾಧ್ಯವಿಲ್ಲ. ಸಿಎಂ ತೇಜೋವಧೆ ಮಾಡಲು ಮುಂದಾದರೆ, ಕಾಂಗ್ರೆಸ್ಸಿಗರು ಸಹಿಸಲ್ಲ. ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ, ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಭ್ರಷ್ಟಾಚಾರವನ್ನು ಕಸುಬಾಗಿ ಮಾಡಿಕೊಂಡ ಭ್ರಷ್ಟರು ನಡೆಸಿದ ಮೈಸೂರು ಚಲೋ ಪಾದಯಾತ್ರೆ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ನಿರೀಕ್ಷೆಯಂತೆ ಜನ ಬೆಂಬಲ ದೊರೆಯಲಿಲ್ಲ. ಹತಾಷರಾಗಿ ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಮುಖಂಡರಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ನರಸಿಂಹರಾಜು, ಪ್ರಕಾಶ್‌ಮೂರ್ತಿ, ಗಂಗಾಧರ್, ಮಹಡಿ ಶಿವಮೂರ್ತಿ, ಆರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net