

ಹಾಸನ: ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಮೆರವಣಿಗೆ ಹೊರಟರು. ದಾರಿಯುದ್ದಕ್ಕೂ ಕಾರ್ಯಕರ್ತರು, ಗವರ್ನರ್ ಹಾಗೂ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಎನ್‌ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ರಾಜ್ಯಪಾಲರು ರಾಜಭವನವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವುದರ ಬದಲಾಗಿ ಬಿಜೆಪಿಯ ರಾಜಕೀಯ ಏಜೆಂಟಾಗಿ ವರ್ತಿಸುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ದೂರು ನೀಡಿದರೂ ಯಾವುದೇ ತನಿಖೆಗೆ ಆದೇಶಿಸಲಿಲ್ಲ. ಈಗ ಯಾರೋ ಮೂರನೇ ವ್ಯಕ್ತಿ ನೀಡಿದ ದೂರು ಆಧರಿಸಿ ಸಿಎಂ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ನಿಲ್ಲಿಸಬೇಕೆಂದು ಬಿಜೆಪಿ-ಜೆಡಿಎಸ್ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಏನೇ ಆದರೂ ನಾವು ಗ್ಯಾರಂಟಿ ನಿಲ್ಲಿಸಲ್ಲ. ಇನ್ನೂ ಹೆಚ್ಚಿನ ಹಣವನ್ನು ಬಡವರಿಗೆ ಕೊಡುತ್ತೇವೆ. ರಾಜ್ಯಪಾಲರ ಮೂಲಕ ನಮ್ಮ ಸರ್ಕಾರವನ್ನು ಅಭದ್ರಗೊಳಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅದಕ್ಕೆ ನಾವು ಬಿಡುವುದೂ ಇಲ್ಲ. ರಾಜಕೀಯ ಏಜೆಂಟರಾಗಿರುವ ರಾಜ್ಯಪಾಲರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯ ಅನೇಕ ಹಗರಣಗಳ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳಲು ರಾಜ್ಯಪಾಲರು ವಿಫಲರಾಗಿರುವುದು ದುರದೃಷ್ಟಕರ. ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮೈನಿಂಗ್ ಹಗರಣ, ಬಿಜೆಪಿ ಅವಧಿಯ ಕೋವಿಡ್ ಹಗರಣ, ಮಾಸ್ಕ್ ಹಗರಣ, ಮೊಟ್ಟೆ ಹಗರಣಗಳ ಬಗ್ಗೆ ಯಾಕೆ ತನಿಖೆಗೆ ಆದೇಶ ಮಾಡಿಲ್ಲ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವುದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಮಾಜಿ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.
ಶಿವಲಿಂಗೇಗೌಡ ಎಡವಟ್ಟು:
ಹೇಮಾವತಿ ಪ್ರತಿಮೆ ಬಳಿ ಮಾತನಾಡುವ ವೇಳೆ ಶಿವಲಿಂಗೇಗೌಡರು, ‘ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಲು ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಒಬ್ಬ ಧೀಮಂತ ನಾಯಕನಿಗೆ ಕಪ್ಪು ಚುಕ್ಕೆ ಇಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಒಂದೇ ಒಂದು ತಪ್ಪು ಮಾಡಿದರೆ ನಿಮ್ಮ ಮನೆ ಜೀತದಾಳಾಗಿ ದುಡಿಯುತ್ತೇನೆ, ಕಾಂಗ್ರೆಸ್‌ನವರೇ ನನ್ನ ಈ ಸವಾಲು ಸ್ಬೀಕರಿಸುತ್ತೀರಾ, ತಾಕತ್ ಇದೆಯಾ ಕಾಂಗ್ರೆಸ್‌ನವರಿಗೆ’ ಎಂದುಬಿಟ್ಟರು. ಆಗ ಪಕ್ಕದಲ್ಲೇ ಇದ್ದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಅವರು, ಬಿಜೆಪಿಯವರಿಗೆ ಅಂತ ಹೇಳಿ ಎಂದು ಎಚ್ಚರಿಸಿದರು. ನಂತರ ತಮ್ಮ ಹೇಳಿಕೆಯನ್ನು ಕೆಎಂಶಿ ಸರಿಪಡಿಸಿಕೊಂಡರು.
ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ:
ಪ್ರತಿಭಟನೆ ವೇಳೆ ಕೆಲವರು ಬಿ.ಎಂ.ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಸಿಎಂ ಪರ ಜಯಘೋಷ ಮೊಳಗಿಸಿದರು. ಇನ್ನು ಕೆಲವರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು. ಈ ನಡುವೆ ಮಹಿಳಾ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ಸಂಜು ಎಂಬುವರು ಬೆಂಕಿ ನಂದಿಸಲು ಬಂದಾಗ ಬೆಂಕಿಯ ಜ್ವಾಲೆ ಜೋರಾಯಿತು. ತಪ್ಪಿಸಿಕೊಳ್ಳಲು ಹೋಗಿ ಕಾನ್ಸ್‌ಟೇಬಲ್ ಕೆಳಗೆ ಬಿದ್ದರು. ಉರಿ ತಗುಲು ಕಾನ್ಸ್‌ಟೇಬಲ್ ತಲೆಯ ಕೂದಲು ಸುಟ್ಟು ಹೋಯಿತು. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿತು.