

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಪಾರಂಪರಿಕ ಚಿಕಿತ್ಸಾ ಪದ್ಧತಿಗಳಿಗೆ ಬೇಡಿಕೆ ಹೆಚ್ಚು. ಆಯುವೇದ, ಹೋಮಿಯೋಪಥಿ ಇಂದಿಗೂ ವಿಶ್ವಾಸನೀಯ ಪದ್ಧತಿಗಳಾಗಿವೆ. ವೈದ್ಯ ವಿದ್ಯಾರ್ಥಿಗಳು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸಿ.ಬಿ. ಗುತ್ತಲ ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ಮಹಾವಿದ್ಯಾಲಯಗಳ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದಲ್ಲಿ ನವಭಾರತ ನಿರ್ಮಾಣಕ್ಕೆ ಪೂರಕವಾಗಿದೆ. ಈ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಸಾಮಾನ್ಯ ಜನರ ಏಳ್ಗೆಗಾಗಿ ಸೇವೆ ಸಲ್ಲಿಸಬೇಕು ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಹೆಚ್ಚೆಚ್ಚು ಸಂಶೋಧನೆ ಆಗಬೇಕು. ವೈದ್ಯ ವಿದ್ಯಾರ್ಥಿಗಳು ಕೇವಲ ಮಾರ್ಕ್ಸ್ ಗಳಿಸಿ ಮಾರ್ಕ್ಸ್‌ವಾದಿಗಳಾಗುವುದು ಬೇಡ ಎಂದು ಸಲಹೆ ನೀಡಿದರು.
ನಂತರ ರಾಜ್ಯಪಾಲರು 135 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪ್ರದಾನ ಮಾಡಿದರು.
ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಕಾರ್ಯದರ್ಶಿ ಡಾ. ಎಸ್.ಬಿ. ಹಿಂಚಿಗೇರಿ, ಸದಸ್ಯರಾದ ಎಂ.ಆರ್. ಪಾಟೀಲ, ಅರುಣ ಜೋಶಿ, ಕಾರ್ಯದರ್ಶಿ ಎಸ್. ರಾಧಾಕೃಷ್ಣನ್, ಪ್ರಾಚಾರ್ಯರಾದ ಡಾ. ಎಸ್.ಟಿ. ಹೊಂಬಳ, ಡಾ. ವೈಷ್ಣವಿ ಇದ್ದರು.