

ಬೀದರ್: ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲೂ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನ ನಡೆಸುವುದಾಗಿ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 2500ಕ್ಕೂ ಅಧಿಕ ಜನರು ಮಹಾಸಭಾ ಸದಸ್ಯತ್ವ ಪಡೆದಿದ್ದಾರೆ. ಇದು ರಾಜ್ಯದಲ್ಲೇ ಅತಿ ಹೆಚ್ಚಿನ ನೋಂದಣಿ ಎನಿಸಿದೆ. ದಾಖಲೆ ಸದಸ್ಯತ್ವ ನೋಂದಣಿ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆ ಮಠಾಧೀಶರು, ಬಸವಪರ ಸಂಘಟನೆ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಶೀಘ್ರವೇ ತಾಲೂಕು ಘಟಕ ರಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕಾಗಿ ರಚಿಸಿರುವ ಮಹಾಸಭಾ ಪಕ್ಷಾತೀತವಾಗಿದೆ. ಲಿಂಗಾಯತದ 102 ಒಳ ಪಂಗಡಗಳ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮಹಾಸಭಾ ಸದಸ್ಯತ್ವ ಪಡೆಯಬೇಕು. ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ತೆರೆದ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ವಿಭಾಗ ಆರಂಭಿಸಲಾಗಿದೆ. ಸದಸ್ಯತ್ವಕ್ಕೆ ಸಂಬಂಧಿಸಿದ ಮಾಹಿತಿಗೆ ಮಹಾಸಭಾ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ (9449274994) ಅವರನ್ನು ಸಂಪರ್ಕಿಸಬಹುದು ಎಂದು ಕೋರಿದ್ದಾರೆ.
ಹುಲಸೂರು ತಾಲೂಕಿನ ಬೇಲೂರಿನಲ್ಲಿ ಒಂದೇ ದಿನ 200 ಜನ ಸದಸ್ಯತ್ವ ಪಡೆದಿದ್ದಾರೆ. ಗ್ರಾಮದ ವಿರಕ್ತ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಕರೆಗೆ ಓಗೊಟ್ಟು ಈ ನೋಂದಣಿ ನಡೆದಿದೆ. ಬೇಲೂರು ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಧನ್ನೂರ ತಿಳಿಸಿದ್ದಾರೆ.