ರಾಜ್ಯದಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಿ : ಯೂಕ್ರೇನ್​ನಿಂದ ಬಂದಿರುವ ವಿದ್ಯಾರ್ಥಿಗಳ ಅಳಲು, ಜಿಲ್ಲಾಧಿಕಾರಿ ವೆಂಕಟ್​ ರಾಜಾಗೆ ಮನವಿ

1
Published on

ಕೋಲಾರ: ಯೂಕ್ರೇನ್​ನಿಂದ ತಾಯ್ನಾಡಿಗೆ ಬಂದಿರುವ ವೈದ್ಯಕಿಯ ವಿದ್ಯಾರ್ಥಿಗಳು ವ್ಯಾಸಂಗ ಮುಂದುವರಿಸಲು ಕರ್ನಾಟಕದ ವೈದ್ಯಕಿಯ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸುವಂತೆ ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರದ ಮೊರೆ ಹೋಗಿದ್ದಾರೆ. ಪಾಲಕರೊಂದಿಗೆ ಸೋಮವಾರ ಜಿಲ್ಲಾಧಿಕಾರಿ ವೆಂಕಟ್​ ರಾಜಾ ಅವರನ್ನು ಭೇಟಿಯಾಗಿದ್ದ ವಿದ್ಯಾರ್ಥಿಗಳು, ಯೂಕ್ರೇನ್​ನಲ್ಲಿ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ನೆರವಿಗೆ ಧಾವಿಸಬೇಕೆಂದು ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲುಪಿಸಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಕಲ್ಪಿಸುವಂತೆ ಕೋರಿದರು. ಯೂಕ್ರೇನ್​ನಲ್ಲಿ ಯಾವುದೇ ಅಡೆತಡೆ ಇಲ್ಲದೆ ವೈದ್ಯಕಿಯ ಶಿಕ್ಷಣ ಪಡೆಯಬಹುದೆಂಬ ಆಸೆಯಿಂದ ನಾವುಗಳು ಅಲ್ಲಿಗೆ ಹೋಗಿದ್ದೆವು, ಯುದ್ಧ ಇಷ್ಟೊಂದು ದೀರ್ಕಾಲ ನಡೆಯುತ್ತದೆ ಎಂದು ಭಾವಿಸಿರಲಿಲ್ಲ, ಜಿಲ್ಲೆಯಿಂದ ಹೋಗಿದ್ದ ವಿದ್ಯಾರ್ಥಿಗಳ ಪೈಕಿ ಕೆಲವರು ಅಂತಿಮ ವರ್ಷದ ಎಂಬಿಬಿಎಸ್​ ಓದುತ್ತಿದ್ದೇವೆ. ಇನ್ನೂ ಕೆಲವರು ವಿವಿಧ ಸೆಮ್​ಗಳಲ್ಲಿ ಮುಂದುವರಿದಿದ್ದಾರೆ. ಯುದ್ಧದಿಂದ ಪಾರಾಗಿ ಬಂದಿರುವುದಕ್ಕೆ ಖುಷಿಯಾಗಿದೆ, ಆದರೆ ವ್ಯಾಸಂಗಕ್ಕೆ ಅಡ್ಡಿಯಾಗಿರುವುದರಿಂದ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ ಎಂದರು. ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ನಿಮ್ಮ ಭವಿಷ್ಯದ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಈಗಾಗಲೇ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು ಚಿಂತನೆ ನಡೆದಿದೆ, ನಿಮ್ಮ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವುದಾಗಿ ತಿಳಿಸಿದರು. ಕೋಲಾರದ ವರ್ಷಿತಾ, ವೇಮಗಲ್​ ದೀತ್​ ರಾಜ್​, ಸಂಕೇಶ್​ ಗೌಡ, ಶೆಟ್ಟಿಹಳ್ಳಿಯ ತನ್ಮಯ್​, ವಿಟ್ಟಪ್ಪನಹಳ್ಳಿಯ ರತ್​, ಪಡತಿಮ್ಮನಹಳ್ಳಿಯ ಗೋವರ್ದನ್​, ಅಂಜುಮ್​ ಫಿಜಾ, ವಿಶಾಲ್​, ಎಂ.ಸಿ.ನರಸಿಂಹರಾಜ್​, ಹೇಮನ್​ ರಾಜ್​ ಹಾಗೂ ಪಾಲಕರು ಇದ್ದರು.

ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ. ಶಿಕ್ಷಣದಿಂದ ವಂಚಿತರಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಯವರ ಭೇಟಿ ಸಮಾಧಾನ ತಂದಿದೆ, ಮುಖ್ಯಮಂತ್ರಿಗಳೂ ಸಹ ಮಕ್ಕಳ ಭವಿಷ್ಯಕ್ಕೆ ಸಮಸ್ಯೆಯಾಗದಂತೆ ಸಹಾಯ ಮಾಡುವ ವಿಶ್ವಾಸವಿದೆ. ವೆಂಕಟೇಶ್​, ವರ್ಷಿತಾ ತಂದೆ, ಕೋಲಾರ ಯೂಕ್ರೇನ್​ಗೆ ಮಕ್ಕಳನ್ನು ಕಳುಹಿಸಲು ಕಾರಣ ಹಾಗೂ ಅಲ್ಲಿ ಆದ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವಂತೆ ಮಕ್ಕಳು ಕೋರಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮ ಮಕ್ಕಳ ಭವಿಷ್ಯ ಕಾಪಾಡುವ ನಂಬಿಕೆ ಇದೆ. ನಾಗರಾಜ್​, ದೀತ್​ ರಾಜ್​ ತಂದೆ, ವೇಮಗಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net