ರಾಜ್ಯದಲ್ಲೇ ನಂ.1 ಇದ್ದರೂ ಮುಗಿಯದ ಗೊಂದಲ

07rajesh6
Published on

ಚಾಮರಾಜನಗರ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ನಂ.1 ಇದ್ದರೂ, ಗಣತಿ ಗೊಂದಲದ ಗೂಡಾಗಿಯೇ ಇದೆ.

ಚಾಮರಾಜನಗರ ಜಿಲ್ಲೆಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ.98.21 ರಷ್ಟು ಪ್ರಗತಿಯನ್ನು ಸಾಧಿಸಿದ್ದು, ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಆದರೆ ಬಾಕಿ ಉಳಿದಿರುವ ಕುಟುಂಬಗಳ ಸಮೀಕ್ಷೆಯನ್ನು ನಡೆಸುವ ಉದ್ದೇಶದಿಂದ ಗಣತಿದಾರರಿಗೆ ಹೆಚ್ಚುವರಿ ರ್ತವ್ಯ ನಿರ್ವಹಿಸುವ ಜವಾಬ್ದಾರಿ ನೀಡಿದ್ದು, ಇದರಿಂದ ಶಿಕ್ಷಕರು ಬುಧವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದ ಡಿ.ದೇವರಾಜ್ ಅರಸು ಭವನದಲ್ಲಿ ಕರೆದಿದ್ದ ಗಣತಿದಾರರ ಸಭೆಯಲ್ಲಿ ಹಲವಾರು ಶಿಕ್ಷಕರು ಮಾತನಾಡಿ, ಚಾಮರಾಜನಗರ ತಾಲೂಕಿನ 937 ಬ್ಲಾಕ್‌ಗಳಲ್ಲಿ ಈಗಾಗಲೇ ಸಮೀಕ್ಷೆ ನಡೆದಿದ್ದು, ಶೇ.80 ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ಆದರೆ ಕೆಲವು ಕಡೆಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿರುವ ಸುಮಾರು 250 ಕ್ಕಿಂತಲೂ ಹೆಚ್ಚು ಶಿಕ್ಷಕರನ್ನು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿರುವುದು ಸೂಕ್ತವಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮೀಕ್ಷೆಯಲ್ಲಿ ಹೆಚ್ಚುವರಿ ಕರ್ತವ್ಯ ನಿರ್ವಹಿಸದಿದ್ದರೇ ಅಂತಹ ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರ್ ಗಿರಿಜಾ ಅವರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಮೀಕ್ಷೆಯೇ ಪೂರ್ಣಗೊಂಡಿರದ ಹಿನ್ನೆಲೆಯಲ್ಲಿ ಈ ಮೊದಲು ಸಮೀಕ್ಷೆಯಲ್ಲಿ ಭಾಗವಹಿಸದೇ ಇರುವ ಶಿಕ್ಷಕರನ್ನು ಇದಕ್ಕೆ ಬಳಕೆ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇಷ್ಟವಿದ್ದರೇ ಭಾಗವಹಿಸಿ:

ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ 13 ತಂಡಗಳು ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೇ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಇಷ್ಟವಿದ್ದರೇ ಸಮೀಕ್ಷೆಯಲ್ಲಿ ಭಾಗವಹಿಸಿ ಇಲ್ಲವಾದರೇ ಬೇಡ ಮತ್ತು ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ತಹಸೀಲ್ದಾರ್ ಗಿರಿಜಾ ಅವರು ಸ್ಪಷ್ಟಪಡಿಸಿದರು. ಕಸಬಾ ಟೌನ್ ಮತ್ತು ಗ್ರಾಮೀಣ ಭಾಗದಲ್ಲಿ ಗಣತಿ ಕಾರ್ಯ ವಿಳಂಬವಾಗಿರುವ ಕಾರಣ ಈಗಾಗಲೇ ಪೂರ್ಣಗೊಳಿಸಿರುವ ಗಣತಿದಾರರಿಗೆ ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿತ್ತು. ಆದರೇ ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಹೇಳಿದರು.

ರಾಜ್ಯದಲ್ಲೇ ನಂ.1:

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯು ಶೇಕಡ 98.21 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಚಾಮರಾಜನಗರ ಶೇ.99.15, ಗುಂಡ್ಲುಪೇಟೆ ಶೇ.97.41, ಕೊಳ್ಳೇಗಾಲ ಶೇ. 94.66, ಯಳಂದೂರು ಹಾಗೂ ಹನೂರು ತಾಲೂಕಿನಲ್ಲಿ ಶೇ. 100ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದ್ದು, ಒಟ್ಟಾರೆ ಚಾಮರಾಜನಗರ ಜಿಲ್ಲೆ ಶೇ. 98.21ರಷ್ಟು ಪ್ರಗತಿ ಸಾಧಿಸಿದೆ. ಸಮೀಕ್ಷೆಯಿಂದ ಯಾವುದಾದರು ಕುಟುಂಬಗಳು ಕೈಬಿಟ್ಟು ಹೋಗಿದ್ದಲ್ಲಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 08226-223160/161/163 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net