

ಬೆಂಗಳೂರು:ಕೊರೊನಾ ವೈರಸ್ ಶಂಕಿತರ ಸ್ವಾ್ಯಬ್ (ಗಂಟಲಿನ ದ್ರವ) ಮತ್ತು ರಕ್ತದ ಮಾದರಿಗಳ ಪರೀಕ್ಷೆಗಾಗಿ ರಾಜ್ಯದಲ್ಲಿ ತುರ್ತಾಗಿ ಮೂರು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಹಾಗೂ ಎರಡು ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಲು ಸರ್ಕಾರ ಸಜ್ಜಾಗಿದೆ.
ಭಾರತದಲ್ಲೂಕೊರೊನಾ ಪ್ರಕರಣಗಳ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್ ಪತ್ತೆಗಾಗಿ ಕೇಂದ್ರ ಸರ್ಕಾರ ದೇಶಾದ್ಯಂತ 52 ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿದ್ದು, ಅದರಂತೆ ಇದೀಗ ಮೈಸೂರು, ಹಾಸನ ಹಾಗೂ ಶಿವಮೊಗ್ಗದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಈಗಾಗಲೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆ ಬಳಿಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಶಂಕಿತರ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೊದಲು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ)ಗೆ ಕಳುಹಿಸಲಾಗುತ್ತಿತ್ತು.
ಮಾದರಿ ಸಂಗ್ರಹ: ಪರೀಕ್ಷಾ ಕೇಂದ್ರಗಳ ಜತೆಗೆ ಕಲಬುರಗಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಕೊರೊನಾ ವೈರಸ್ ಶಂಕಿತರ ಮಾದರಿಗಳನ್ನು ಸಂಗ್ರಹಿಸಲು ಮಾದರಿ ಸಂಗ್ರಹ ಕೇಂದ್ರಗಳು ತೆರೆಯಲಾಗುತ್ತಿದೆ.
ವಿದ್ಯಾರ್ಥಿಗಳ ನಿಯೋಜನೆ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತಪಾಸಣಾ ಕಾರ್ಯವನ್ನು ಮತ್ತಷ್ಟು ಬಲಗೊಳಿಸಿರುವ ಆರೋಗ್ಯ ಇಲಾಖೆ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲಿ ಪ್ರಯಾಣಿಕರ ತಪಾಸಣೆ ಮತ್ತು ಶಂಕಿತರ ಸರ್ವೆಕ್ಷಣೆ ನಡೆಸಲು ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಂಡಿದೆ.
ಸ್ಯಾನಿಟೈಸರ್ಗೆ ಬೇಡಿಕೆ
ಬೆಂಗಳೂರಿನ ಟೆಕ್ಕಿಗೆ ಕೊರೊನಾ ವೈರಸ್ ದೃಢಪಟ್ಟಿರುವ ಬೆನ್ನಲ್ಲೆ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದ್ದು, ಸಣ್ಣಪುಟ್ಟ ಶೀತ ಸಂಬಂಧಿ ಸಮಸ್ಯೆಗಳಿಗೂ ಜನರು ಆಸ್ಪತ್ರೆಯತ್ತ ಮುಖಮಾಡುತ್ತಿದ್ದಾರೆ. ಮತ್ತೊಂದೆಡೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ರಾಜ್ಯದ ಜನರು ಕೊರೊನಾ ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ ಈವರೆಗೆ ಯಾರಲ್ಲೂ ಕರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಈ ಮೊದಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಪುಣೆಗೆ ಕಳುಹಿಸಲಾಗುತ್ತಿತ್ತು. ಇದೀಗ ಬೆಂಗಳೂರಿನಲ್ಲೇ ಮಾಡಲಾಗುತ್ತಿದೆ. | ಬಿ.ಶ್ರೀರಾಮುಲು ಆರೋಗ್ಯ ಸಚಿವ