

ಚಿತ್ರದುರ್ಗ: ನೀರಾವರಿ ಇಲಾಖೆ ಕಡೆಗಣನೆಯಿಂದಾಗಿ ತುಂಗಭದ್ರಾ ಡ್ಯಾಂ ಅವಘಡ ಸಂಭವಿಸಿದ್ದು, ಇಲಾಖೆಯಲ್ಲಿ ಪಾರ್ಟ್ ಟೈಮ್ ಸಚಿವರಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಜವಾಬ್ದಾರಿ ಹೆಚ್ಚಾಗಿದ್ದರಿಂದಾಗಿ ನೀರಾವರಿ ಇಲಾಖೆ ಕಡೆಗಣಿಸಿದ್ದಾರೆ. ಅಣೆಕಟ್ಟು ಸುರಕ್ಷತಾ ಸಮಿತಿ ಸಭೆ ಕರೆದು ಸಲಹೆ ಪಡೆಯಬಹುದಿತ್ತು. ನಿರ್ಲಕ್ಷವೇ ಡ್ಯಾಂ ಅವಘಡಕ್ಕೆ ಕಾರಣ. ಹೀಗಾಗಿ 15 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ನಷ್ಟ ಅನುಭವಿಸಿದ್ದು, ಪರಿಹಾರವೇನು ಎಂದು ಪ್ರಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಸುರಕ್ಷತೆಯ ಜವಾಬ್ದಾರಿಯನ್ನೇ ಮರೆತಂದಿದೆ. ಅತಿವೃಷ್ಟಿ, ಅನಾವೃಷ್ಟಿ ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ ಕಡೆ ಬೊಟ್ಟು ತೋರಿಸುವುದು ಸರಿಯಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಎಲ್ಲವನ್ನೂ ಬಾಚಿಕೊಂಡು ಹೋಗಲಿಕ್ಕಾ ಸರ್ಕಾರ ಇರುವುದು. ಸಿಎಂ ಸಿದ್ದರಾಮಯ್ಯ ಕುಟುಂಬ ಮುಡಾದಿಂದ 14 ನಿವೇಶನ ಪಡೆದಿದ್ದು ಸುಳ್ಳಾ ಎಂದು ವಾಗ್ದಾಳಿ ನಡೆಸಿದರು.
ಟಿಬಿ ಡ್ಯಾಂನ 52ಟಿಎಂಸಿ ನೀರು ಹರಿದು ವ್ಯರ್ಥವಾಗುತ್ತಿದೆ. ಇದಕ್ಕೆ ಪರ್ಯಾಯ ಹುಡುಕಬೇಕೆ ಹೊರತು ಕಾಲಾಹರಣ ಮಾಡಬಾರದು ಎಂದ ಅವರು, ಮೇಕೆದಾಟು ಪಾದಯಾತ್ರೆ ವೇಳೆ ವಯೋವೃದ್ಧರನ್ನು ನಡೆಸಿದರು. ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಯೋಜನೆ ಜಾರಿಯ ಭರವಸೆ ನೀಡಿದ್ದರು. ಆದರೀಗ ನಿದ್ರೆಗೆ ಜಾರಿದ್ದಾರೆ ಎಂದು ಟೀಕಿಸಿದರು.