ರಾಜ್ಯದಲ್ಲಿ ವೀರಶೈವ ಮಠಗಳ ಸೇವೆ ಅಪಾರ

Published on

ಗುಂಡ್ಲುಪೇಟೆ: ರಾಜ್ಯದಲ್ಲಿ ವೀರಶೈವ ಮಠಗಳ ಸೇವೆ ಅಪಾರವಾಗಿದ್ದು ಇನ್ನೂ ವಿಸ್ತಾರವಾಗಿ ದೇಶಾದ್ಯಂತ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಗುರುವಾರ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿ ಗುರುಸೇವೆ ಮಾಡಿ ವಿದ್ಯೆ ಕಲಿತಿದ್ದ ರಾಜೇಂದ್ರ ಶ್ರೀಗಳು ಸಮಾಜದ ಒಳಿತಿಗಾಗಿ ಬದುಕಿ ಬಾಳಿದ್ದರು. ಗ್ರಾಮೀಣ ಹಾಗೂ ಬಡ ಜನರ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದಿದ್ದರು ಎಂದು ಹೇಳಿದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ತನ್ನ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯನ್ನು ಮಾಡಿದೆ. ರಾಜೇಂದ್ರ ಶ್ರೀಗಳು ತಮ್ಮ ಮಾತೃ ಹೃದಯದಿಂದ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನದಾಸೋಹ ಮಾಡಿದ್ದರು. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ ಮಾತನಾಡಿ, ಲೋಕತೃಪ್ತಿ ಹಾಗೂ ಆತ್ಮತೃಪ್ತಿಯಿಂದ ಕೆಲಸ ಮಾಡಿದ್ದ ರಾಜೇಂದ್ರ ಶ್ರೀಗಳು ಸಮಾಜಮುಖಿಯಾಗಿದ್ದರಿಂದ ಹೆಚ್ಚಿನ ಜನತೆಗೆ ಶಿಕ್ಷಣ ದೊರಕುವಂತಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ರಾಜೇಂದ್ರ ಶ್ರೀಗಳ ಭಾವಚಿತ್ರವನ್ನು ಟ್ರ್ಯಾಕ್ಟರ್ ಮೇಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಪುರಸಭೆ ಅಧ್ಯಕ್ಷ ಪಿ.ಶಶಿಧರ್(ದೀಪು), ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ನಿರ್ದೇಶಕ ನಾಗೇಂದ್ರ, ಕಾಲೇಜಿನ ಪ್ರಾಂಶುಪಾಲೆ ಡಾ.ಮಹದೇವಮ್ಮ ಸೇರಿದಂತೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net