

ಚಿತ್ರದುರ್ಗ: ರಾಜ್ಯದಲ್ಲಿ ಯುವಜನ ಆಯೋಗ ರಚಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಯುವಜನ ಆಯೋಗ ಹೋರಾಟ ಸಮಿತಿ ಸಂಚಾಲಕ ಅಜೇಯ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಆಯೋಗ ಈಗಾಗಲೇ ಇದ್ದು, ಅದೇ ಮಾದರಿಯಲ್ಲಿ ಯುವಸಮೂಹಕ್ಕಾಗಿ ಆಯೋಗ ರಚಿಸಿದರೆ, ವಿವಿಧ ಸಮಸ್ಯೆ ಹಾಗೂ ಹಕ್ಕುಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು.
ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಯುವಜನ ಆಯೋಗ ರಚನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಇಲ್ಲದ ಕಾರಣ ರಚಿಸುವಂತೆ ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಸ್ಪಂದಿಸುವ ವಿಶ್ವಾಸವಿದೆ ಎಂದರು.
ಯುವಸಮೂಹ ರಾಷ್ಟ್ರದ ಬೆನ್ನೆಲುಬು. ಹೀಗಾಗಿ ಆಡಳಿತ ಪಕ್ಷಗಳು ನಿರ್ಲಕ್ಷೃ ಮಾಡುತ್ತಿರುವುದು ಸರಿಯಲ್ಲ. ಚುನಾವಣೆ ವೇಳೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಯುವಜನಾಂಗದ ಗೌರವಕ್ಕೆ ಧಕ್ಕೆ ಉಂಟಾಗದ ರೀತಿಯಲ್ಲಿ ಶೋಷಣೆ ಮುಕ್ತ ಸಮಾಜ ನಿರ್ಮಿಸಬೇಕಿದೆ. ಸಂವಿಧಾನ ಆಶಯದಂತೆ ಯುವಜನರ ಹಕ್ಕು ಮತ್ತು ಕರ್ತವ್ಯ ಕಾಪಾಡಬೇಕಿದೆ. ಆದ್ದರಿಂದ ಆಯೋಗ ರಚಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ಈ ಸಂಬಂಧ ಶೀಘ್ರದಲ್ಲೇ ಸಿಎಂ ಭೇಟಿ ಮಾಡಲಾಗುವುದು ಎಂದರು.
ಪುರುಷೋತ್ತಮ, ಜೆ.ಮೋಹನ್‌ಕುಮಾರ್, ಚೇತನ್, ಜಯಶ್ರೀ, ಸೂರಯ್ಯ ಇತರರಿದ್ದರು.