

ಸೊರಬ: ಎಲ್ಲ್ಲ ಸಮುದಾಯಗಳ ಅಭಿವೃದ್ಧಿಗೆ ದೂರದೃಷ್ಟಿ ಹೊಂದಿದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಮೊತ್ತೊಮ್ಮೆ ಅಧಿಕಾರಕ್ಕೆ ಬರಲು ನಾವೆಲ್ಲರೂ ಶ್ರಮಿಸುವ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ಹೇಳಿದರು.
ಭಾನುವಾರ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜನಪರ ಕೆಲಸ ಮಾಡುವ ನರೇಂದ್ರ ಮೋದಿ ಸರ್ಕಾರಕ್ಕೆ ಶಕ್ತಿ ನೀಡುವ ಜತೆಗೆ ಬಿಜೆಪಿ ಯಾರ ಹಂಗಿಲ್ಲದೆ ಅಧಿಕಾರ ಹಿಡಿಬೇಕು ಎಂಬ ಉದ್ದೇಶ ಇಟ್ಟುಕೊಂಡು ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಮೋರ್ಚಾದಿಂದ ಪ್ರಚಾರ ಕೈಗೊಂಡಿದ್ದೇವೆ. ನಾಡಿನಲ್ಲಿ ಶೇ.60 ಇರುವ ಹಿಂದುಳಿದ ವರ್ಗದವರನ್ನು ಅಭಿವೃದ್ಧಿಪಡಿಸಲು ಕಾಂತರಾಜ್ ವರದಿ, ಕಾಕಲ್ಕರ್ ವರದಿ, ಹಾವನೂರು ವರದಿ, ನ್ಯಾ. ರೋಹಿಣಿ ವರದಿ ಆಧರಿಸಿ ನಿಗಮ, ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಪ್ರಜಾಪ್ರಭುತ್ವ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಜನಜಾಗೃತಿ ಅಗತ್ಯ. ಸ್ಥಳೀಯ ಪಂಚಾಯಿತಿಗಳಿಗೆ ದೊರಕಿದ ಮೀಸಲಾತಿಯು ಸಂಸತ್, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಕೂಡ ಜಾರಿಗೊಳಿಸುವ ಅಗತ್ಯ ಇದ್ದು ಇದರಿಂದ ಬಹುಸಂಖ್ಯಾತರಿರುವ ಹಿಂದುಳಿದ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.
ಗಳಿಸಿಕೊಂಡಿದ್ದನ್ನು ಉಳಸಿಕೊಳ್ಳುವುದು, ಕಳೆದುಕೊಂಡಿದ್ದನ್ನು ಗಳಿಸಿಕೊಳ್ಳಲು ಬಿಜೆಪಿ ತಳಹಂತದ ಸಂಘಟನೆಗೆ ಒತ್ತು ನೀಡಿ, ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಪ್ರಧಾನಿ ಕೂಡ ಎಲ್ಲ ಜಾತಿ, ಸಮುದಾಯಗಳನ್ನು ಸಮಾನವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಹಿಂದುಳಿದ ವರ್ಗಗಳ ಸ್ಪರ್ಧಾಕಾಂಕ್ಷಿಗಳಿಗೆ 9 ಬಾರಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಹಿಂದೆ ಹಲ್ಲುಕಿತ್ತ ಹಾವಿನಂತಿದ್ದ ಹಿಂದುಳಿದ ವರ್ಗಗಳ ಆಯೋಗವನ್ನು ನರೇಂದ್ರ ಮೋದಿ ಸರ್ಕಾರ ಸಂವಿಧಾನಾತ್ಮಕವಾಗಿ ಶಕ್ತಿ ನೀಡುವ ಮೂಲಕ ದೇಶದಲ್ಲಿ 16 ಹಿಂದುಳಿದ ವರ್ಗಗಳ ಆಯೋಗಗಳು ಕೆಲಸ ಮಾಡುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ, ರಾಷ್ಟ್ರದ ಎಲ್ಲ ವರ್ಗಗಳ ಪ್ರಗತಿಗೆ ಬಿಜೆಪಿಯನ್ನು ಜನರು ಬೆಂಬಲಿಸುವ ಅಗತ್ಯವಿದೆ ಎಂದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಮುಂದುವರಿದ ಜಾತಿಗಳಿಗೆ ಗುರು ಪರಂಪರೆಯ ಮಾರ್ಗದರ್ಶನವಿದ್ದರೆ, ಹಿಂದುಳಿದ ವರ್ಗಗಳ ಸಮುದಾಯಗಳಿಗೆ ರಾಜಕೀಯ ನಾಯಕರ ಬೆಂಬಲವಿದೆ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಜಾತಿ ಹುಟ್ಟುಹಾಕುವುದು ಬೇಡ. ಅಂಬೇಡ್ಕರ್ ಸಂವಿಧಾನದ ಮೂಲಕ ಬಡವರ ಆಶೋತ್ತರಗಳನ್ನು ಈಡೇರಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಹಿಂದುಳಿದ ವರ್ಗದವರ ಪರವಾಗಿ ಕಾಂಗ್ರೆಸ್ ಇದೆ ಎಂದು ಹೇಳುತ್ತಾರೆಯೇ ಹೊರತು ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರು ಹಿಂದುಳಿದ ಸಮುದಾಯಗಳ ಅಭಿವೃದ್ಧಿ 2,540 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು 1,200 ಕೋಟಿ ರೂ. ಅನುದಾನ ನೀಡಿದ್ದರು ಎಂದು ಹೇಳಿದರು.