ರಾಜ್ಯದಲ್ಲಿ ಬಿಜೆಪಿ ರೌಡಿ ಮೋರ್ಚಾ ಆರಂಭಿಸಲು ಹೊರಟಿದೆ: ಎಂ.ಲಕ್ಷ್ಮಣ್ ಟೀಕೆ

Published on

ಮೈಸೂರು: ಈಗಾಗಲೇ 36 ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಿಜೆಪಿ, ಇನ್ನೂ 60 ಪ್ರಮುಖ ರೌಡಿ ಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.
ರೌಡಿ ಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಮುಂದೆ ರಾಜ್ಯದಲ್ಲಿ ರೌಡಿ ಮೋರ್ಚಾ ಆರಂಭಿಸಲು ಹೊರಟಂತಿದೆ. ಇವರನ್ನು ಬಳಸಿಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಜನರನ್ನು ಹೆದರಿಸಿ ಗೆಲ್ಲಲು ಸಜ್ಜಾಗುತ್ತಿರುವಂತಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಪಕ್ಷಕ್ಕೆ ಸೇರ್ಪಡೆಗೊಂಡಿರುವ ರೌಡಿಶೀಟರ್‌ಗಳ ಪೈಕಿ 10 ಜನರನ್ನು ವಿಧಾನಸಭಾ ಕ್ಷೇತ್ರ, 25 ಜನರನ್ನು ಬಿಬಿಎಂಪಿಯಿಂದ ಬಿಜೆಪಿ ಕಣಕ್ಕಿಳಿಸಲಿದೆ ಎನ್ನುವ ಮಾಹಿತಿ ಇದೆ. ರೌಡಿಗಳು ಮನಪರಿವರ್ತನೆಯಾಗಿ ಪಕ್ಷ ಸೇರ್ಪಡೆಗೊಂಡರೆ ತಪ್ಪೇನು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಭಯೋತ್ಪಾದಕರು ಮನಪರಿವರ್ತನೆಯಾಗಿದೆ ಎಂದರೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಿರಾ ಎಂದು ಪ್ರಶ್ನಿಸಿದರು.
ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 2018ರಿಂದ ಏ.1ರವರೆಗೆ 23 ಸಾವಿರ ಇದ್ದ ರೌಡಿಶೀಟರ್‌ಗಳ ಪಟ್ಟಿ 2022 ಜೂನ್ ಅಂತ್ಯಕ್ಕೆ 33 ಸಾವಿರಕ್ಕೆ ಏರಿಕೆಯಾಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ಇದ್ದ ರೌಡಿಶೀಟರ್‌ಗಳ ಪ್ರಮಾಣ 6,620ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈಗ 8 ಸಾವಿರ, ಬೆಂಗಳೂರಿನಲ್ಲಿ ಒಂದು ಸಾವಿರ ರೌಡಿಗಳು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿರುವವರು ಇದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಚಾಮರಾಜಪೇಟೆ, ಮೈಸೂರಿನ ಎನ್. ಆರ್.ಕ್ಷೇತ್ರದಲ್ಲಿ ಬಿಜೆಪಿ ಕಾಲಿಡಲು ಸಾಧ್ಯವಿಲ್ಲದಂತಹ ಸನ್ನಿವೇಶ ಇದೆ. ಹಾಗಾಗಿ ಅಮಿತ್ ಷಾ ಹಾಗೂ ಆರ್‌ಎಸ್‌ಎಸ್ ನಿರ್ದೇಶನದ ಮೇರೆಗೆ ಇಂತಹ ಕಡೆ ರೌಡಿಶೀಟರ್ ಬಳಸಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಮುಖಂಡರೇ ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಹಿಂದುಳಿದ ವರ್ಗದ ಕಾರ್ಯದರ್ಶಿ ಮಹೇಶ್, ಮಾಧ್ಯಮ ವಕ್ತಾರ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net