

ಹನೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯಲ್ಲಿ ಗುರುವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ. ಇದರಿಂದ ಬಿಜೆಪಿ ಪಕ್ಷ ಜನಮನ್ನಣೆ ಗಳಿಸಿದೆ. ಹಾಗಾಗಿ ಪಕ್ಷದ ಸಿದ್ಧಾಂತ ಹಾಗೂ ಆಡಳಿತವನ್ನು ಮೆಚ್ಚಿ ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಗ್ರಾಪಂ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಒಂದು ವಾರದಿಂದ ಪಿ.ಜಿ ಪಾಳ್ಯ, ಧನಗೆರೆ, ದೊಡ್ಡಲತ್ತೂರು, ಸತ್ತೇಗಾಲ ಗ್ರಾಪಂ ಸದಸ್ಯರು ಸೇರ್ಪಡೆಯಾಗುತ್ತಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ. ಆದ್ದರಿಂದ ಈ ಬಾರಿ ಹನೂರು ಕ್ಷೇತ್ರದಲ್ಲಿ ಕಮಲ ಅರಳುವುದಂತೂ ಖಚಿತ ಎಂದು ತಿಳಿಸಿದರು.
ಇದೇ ವೇಳೆ ಸತ್ತೇಗಾಲ ಗ್ರಾ.ಪಂ.ನ ಜೆಡಿಎಸ್ ಬೆಂಬಲಿತ ಸದಸ್ಯರಾದ ಮಂಟೇಸ್ವಾಮಿ, ಪನ್ನಾಡಿ, ಸಿದ್ದಪ್ಪಾಜಿ, ಪಾರ್ಥಿಪನ್, ಪುಷ್ಪ, ಲತಾ, ನಾಗೇಂದ್ರ, ಸುಮರಾಜ್, ಶೇಖರ್, ನಾಗರಾಜು, ಕೆಂಪರಾಜು ಹಾಗೂ ಕಾಂಗ್ರೆಸ್‌ನ ಮಹೇಶ್, ಭೈರಾ, ಶಿವು, ನಂಜುಂಡಮೂರ್ತಿ ಬಿಜೆಪಿಗೆ ಸೇರ್ಪಡೆಯಾದರು.