

ಅರಸೀಕೆರೆ : ರಾಜ್ಯದಲ್ಲಿ ಬಿಜೆಪಿ ಪಕ್ಷ ಬಿದ್ದೋಗಿದ್ದು, ಮೇಲೆತ್ತಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದಿದ್ದಾರೆ. ಆದರೆ ಅದು ಕಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅರಸೀಕೆರೆಯ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಮೇಲೆತ್ತಲು ಸಾಧ್ಯವಿಲ್ಲ. ಹೀಗಾಗಿ ಮೋದಿಯವರು ಹುಲಿ ನೋಡಿಕೊಂಡು ಹೋಗಲು ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಹೊಸ ಅಧ್ಯಾಯ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ದಿನ ಮೇ.10. ಅಂದು ರಾಜ್ಯಕ್ಕೆ ಹೊಸ ಭವಿಷ್ಯವನ್ನ, ಅಭಿವೃದ್ಧಿ ಶೀಲ ಕರ್ನಾಟಕ ನಿರ್ಮಾಣ ಮಾಡುವ ದಿನವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ವಿಶ್ವಾಸ ಕಳೆದುಕೊಂಡಿವೆ. ಹೀಗಾಗಿ ಆ ಪಕ್ಷದವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.
ವೈಎಸ್‌ವಿ ದತ್ತಾ ಸ್ವತಂತ್ರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಯಾರೂ ಕಂಡಿಷನ್ ಆಗಿ ಟಿಕೆಟ್ ಕೊಡುತ್ತೇವೆ ಎಂದು ಯಾರನ್ನೂ ಕರೆಸಿಕೊಂಡಿಲ್ಲ. ದತ್ತ ಅವರಿಗೆ ಒಳ್ಳೆಯ ಸ್ಥಾನಮಾನ ಕೊಡಬೇಕು ಕೊಡುತ್ತೇವೆ. ಅವರು ಕಾಂಗ್ರೆಸ್‌ಗೆ ಸೇರಬೇಕಾದರೆ ಏನು ಮಾತನಾಡಿದ್ದರು ಎಂಬುದನ್ನು ಗಮನಿಸಿ, ಆಮೇಲೆ ಮಾತನಾಡೋಣ ಎಂದರು.
ನಮ್ಮ ಪಕ್ಷಕ್ಕೆ ಹಲವು ನಾಯಕರು ಬರುತ್ತಿದ್ದಾರೆ ಅವರು ಯಾರು ಕೂಡ ದಡ್ಡರಲ್ಲ, ಎಲ್ಲರೂ ಕೂಡ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿ ಅನುಭವ ಇರುವವರು. ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಬರುವವರ ಪಟ್ಟಿಯನ್ನು ಬೇಕಾದರೆ ನಾನು ಕೊಡುತ್ತಾನೆ ಎಂದು ಹೇಳಿದರು.
ಅರಸೀಕೆರೆಯಲ್ಲಿ ಇಂದಿನಿಂದ ಗೃಹ ಜ್ಯೋತಿ ಬೆಳಗಲಿದೆ, ಇದು ಪ್ರತಿ ಗ್ರಾಮದಲ್ಲಿ ಕೂಡ ಈ ಬೆಳಕು ಬೆಳಗಬೇಕು. ಕಾಂಗ್ರೆಸ್ ಪಕ್ಷ ಈಗಾಗಲೇ ಬಿಡುಗಡೆ ಮಾಡಿರುವ ಗ್ಯಾರೆಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ರಾಜ್ಯಾದ್ಯಂತ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ನಮಗೆ ನಮ್ಮ ಅಧಿಕಾರ ಮುಖ್ಯವಲ,್ಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಮುಖ್ಯ, ಆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ, ನಿಲ್ಲದಿದ್ದರೆ ನಾವು ಮನುಷ್ಯರಾಗುತ್ತಿವಾ, ಮಲ್ಲಿಕಾರ್ಜುನ ಖರ್ಗೆ ಅವರ ಸೇವೆ ಹಾಗೂ ಅವರ ಕೆಲಸಗಳು ನಮಗೆ ಸ್ಪೂರ್ತಿ, ಸಾಮಾನ್ಯ ಕಾರ್ಯಕರ್ತನಿಂದ ಇದೀಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.