ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ

10tnpnewsfilephoto01
ತಿ.ನರಸೀಪುರ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಎಸ್.ಕೆ.ಕಿರಣ್ ನಿವಾಸದ ಮೇಲೆ ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಪಕ್ಷದ ಬಾವುಟ ಕಟ್ಟಿದರು. ಗೂಳಿ ಮಹೇಶ್, ಕರೋಹಟ್ಟಿ ಮಹಾದೇವಯ್ಯ,ಶಿವಕುಮಾರ್ ಇತರರಿದ್ದರು.
Published on

ತಿ.ನರಸೀಪುರ: ಪ್ರಧಾನಿ ನರೇಂದ್ರ ಮೋದಿ ದೇಶ ಹಾಗೂ ವಿಶ್ವವೇ ಮೆಚ್ಚುವ ನಾಯಕರಾಗಿದ್ದು ಅವರು ಜಾರಿಗೆ ತಂದ ಜನೋಪಯೋಗಿ ಕಾರ್ಯಕ್ರಮಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಹಾಗೂ ಶಕ್ತಿ ಕೇಂದ್ರದ ಅಧ್ಯಕ ಎಸ್.ಕೆ.ಕಿರಣ್ ಅವರ ನಿವಾಸದ ಮೇಲೆ ಪಕ್ಷದ ಬಾವುಟ ಕಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುವ ಮೂಲಕ ಪಕ್ಷದ ಪರವಾದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಪ್ರತಿಪಕ್ಷಗಳ ಆರೋಪದಂತೆ ಸರ್ಕಾರಿ ಶಾಲೆ ಮಕ್ಕಳ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿಲ್ಲ. ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಆಡಳಿತ ಪಕ್ಷದಲ್ಲಿ ಲೋಪಗಳಿದ್ದರೆ ತಿದ್ದುವ ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿ ಮರೆತು ಜನರಿಗೆ ಆಸಕ್ತಿ ಇಲ್ಲದ ಸ್ಯಾಂಟ್ರೋ ರವಿಯಂತಹ ವಿಷಯಗಳನ್ನು ಎಳೆದು ತಂದು ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿಸಕಾರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡವಾಡಿ ಮಹೇಶ್ ಮಾತನಾಡಿ, ಬೂತ್ ವಿಜಯ ಅಭಿಯಾನ ಜ.12 ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಬೂತ್ ಕಮಿಟಿ ಸದಸ್ಯರು ಎಲ್ಲ ಮತದಾರರನ್ನು ಭೇಟಿ ಮಾಡಿ ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಕೆ.ಕಿರಣ್ ಮಾತನಾಡಿ, ಪಕ್ಷಕ್ಕೆ ಬೂತ್ ಬಲವೇ ಆಧಾರವಾಗಿದೆ. ಸ್ಥಳೀಯ ಮತದಾರರು ಮತ್ತು ಜನ ಸಮುದಾಯಗಳ ಜತೆ ಬೂತ್ ಸದಸ್ಯರು ನಿರಂತರ ಸಂಪರ್ಕ ಹೊಂದಿರಬೇಕು ಎಂದರು.

ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಗೂಳಿ ಮಹೇಶ್, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹಾದೇವಯ್ಯ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶಿವಕುಮಾರ್, ನಂದನ್‌ಕುಮಾರ್, ಬೂತ್ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಬಸವರಾಜು, ಯುವ ಮೋರ್ಚಾ ಕಾರ್ಯದರ್ಶಿ ವಿಜಯಕುಮಾರ್, ರಮೇಶ್, ಸೋಮಶೇಖರ್, ಎಸ್ಸಿ ಮೋರ್ಚಾ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net