ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಶಿವಪ್ಪ

31spt2
Published on

ಸೋಮವಾರಪೇಟೆ: ಬಿಜೆಪಿಯು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಹಿರಿಯ ಮುತ್ಸದ್ದಿ ರಾಜಕಾರಣಿ ಬಿ.ಬಿ.ಶಿವಪ್ಪ ಕಾರಣ ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ಬಣ್ಣಿಸಿದರು.
ಪಟ್ಟಣದಲ್ಲಿ ಮಹಿಳಾ ಸಮಾಜದಲ್ಲಿ ಇತ್ತೀಚೆಗೆ ಬಿ.ಬಿ.ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಪ್ಪ ಅವರು ತಮ್ಮ ಆಸ್ತಿ ಮಾರಾಟವಾದರೂ ಪರವಾಗಿಲ್ಲ, ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತೇನೆ ಎಂದು ಪಣ ತೊಟ್ಟು ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಇವರ ಶ್ರಮದಿಂದಲೇ ರಾಜ್ಯದಲ್ಲಿ ಬಿಜೆಪಿ ಈಗ ಹೆಮ್ಮರವಾಗಿ ಬೆಳೆದಿದೆ. ಅವರು ಸಕಲೇಶಪುರದಲ್ಲಿಯೂ ಪಕ್ಷ ಸಂಘಟಿಸಿದರ ಫಲವಾಗಿ ನಾನು ಈ ದಿನ ಶಾಸಕನಾಗಲು ಸಾಧ್ಯವಾಗಿದೆ. ಇಂತಹ ಧೀಮಂತ ವ್ಯಕ್ತಿಯ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಮಟ್ಟದಲ್ಲಿ ಆಚರಿಸುವಂತಾಗಬೇಕು ಎಂದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕರ್ನಾಟಕದ ಬಿಜೆಪಿಗೆ ಶಿವಪ್ಪ ಹಾಗೂ ಸುಶೀಲಮ್ಮ ಮಾತಾ-ಪಿತೃಗಳಿದ್ದಂತೆ. ಶಿವಪ್ಪ ಅವರು ಯಾವತ್ತೂ ಅಧಿಕಾರಕ್ಕಾಗಿ ಪಕ್ಷ ಸಂಘಟಿಸಿದವರಲ್ಲ. ಈ ಹಿಂದೆ 44 ಜನ ಬಿಜೆಪಿ ಶಾಸಕರಿದ್ದ ಸಂದರ್ಭ ಬಿ.ಬಿ.ಶಿವಪ್ಪ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವಾಗ ನಾನು ಸೇರಿದಂತೆ 12 ಜನ ಮಾತ್ರ ಪರವಾಗಿ ಮತ ಚಲಾಯಿಸಿದ್ದು ಬೇಸರದ ಸಂಗತಿಯಾಗಿತ್ತು. ರಾಜ್ಯದಲ್ಲಿನ ಬಿಜೆಪಿಗೆ ಅಡಿಪಾಯವೇ ಬಿ.ಬಿ.ಶಿವಪ್ಪ ಎಂದು ವರ್ಣಿಸಿದರು.
ಬಿಜೆಪಿ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಡಿ.ಮಂಜುನಾಥ್, ಬಿ.ಬಿ.ಶಿವಪ್ಪ ಅವರ ಪುತ್ರ ಪ್ರತಾಪ್, ಪ್ರಮುಖರಾದ ಬಿ.ಟಿ.ತಿಮ್ಮಶೆಟ್ಟಿ, ಮಾಲಂಬಿ ಪ್ರೇಮನಾಥ್, ಕೆ.ಎನ್.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net