ರಾಜ್ಯದಲ್ಲಿ ಪ್ರತಿವರ್ಷ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ-ಡಾ.ಶೇಖರ್ ಸಜ್ಜನರ

mahiti hakku adhiniyam-1
Published on

ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ಮಾಹಿತಿದ ನೀಡಿ ನಿವೃತ್ತಿ ಆಯುಕ್ತ
ಬೆಳಗಾವಿ:
ಮಾಹಿತಿ ಹಕ್ಕು ಕಾಯ್ದೆಯು ಅತ್ಯಂತ ಸರಳವಾಗಿದೆ. ಸರಕಾರಿ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ತ್ವರಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಾಲಮಿತಿಯಲ್ಲಿ ಒದಗಿಸಬೇಕು ಎಂದು ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಡಾ.ಶೇಖರ್ ಸಜ್ಜನ ಹೇಳಿದರು.
ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮಗಳು ಮತ್ತು ಅಧಿನಿಯಮಗಳ ಕುರಿತು ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರಗವಹಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಮಾಹಿತಿ ಲಭ್ಯವಿಲ್ಲದಿದ್ದರೆ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ತಿಳಿಸಬೇಕು. ಮಾಹಿತಿ ಹಕ್ಕು ಅಧಿನಿಯಮದ ಕುರಿತು ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕಡ್ಡಾಯವಾಗಿ ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ. ದೇಶದಲ್ಲಿ ಪ್ರತಿವರ್ಷ ಅಂದಾಜು 50 ಲಕ್ಷ ಹಾಗೂ ಕರ್ನಾಟಕ ರಾಜ್ಯದಲ್ಲಿ ಐದು ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು,ಇವುಗಳಲ್ಲಿ ಶೇ.3 ರಷ್ಟು ಮೇಲ್ಮನವಿ ಸಲ್ಲಿಕೆಯಾಗುತ್ತಿವೆ.
ಸರ್ಕಾರಿ ಕಚೇರಿಗಳಲ್ಲಿ ಶೇ.40 ರಷ್ಟು ಸಿಬ್ಬಂದಿ ಕೊರತೆ ಇರುವುದರಿಂದ ಮಾಹಿತಿ ಹಕ್ಕುಗಳ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಡಾ.ಸಜ್ಜನರ ಹೇಳಿದರು. ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಿರಸ್ಕರಿಸಬಹುದಾಗಿದೆ. ಅರ್ಜಿಗಳನ್ನು ತಿರಸ್ಕರಿಸಿದಾಗ ಐಪಿಓ ಹಿಂದಿರುಗಿಸುವಂತಿಲ್ಲ.
ನಿಯಮಾವಳಿ ಅನುಸಾರ ಎ.ಬಿ.ಸಿ.ಡಿ.ಇ. ಕೆಟಗರಿ ಪ್ರಕಾರ ಸರ್ಕಾರಿ ದಾಖಲೆಗಳನ್ನು ಸಂರಕ್ಷಿಸಿಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಅರ್ಜಿದಾರರಿಗೆ ನೀಡುವ ಅಗತ್ಯವಿರುವುದಿಲ್ಲ. ಅರ್ಜಿದಾರರು ಯಾವುದೇ ಅಧಿಕಾರಿಗಳಿಗೆ ನಿರ್ದೇಶನ, ಸಲಹೆ, ಮಾರ್ಗದರ್ಶನ ನೀಡಲು ಅಥವಾ ಪ್ರಶ್ನೆ ಕೇಳಲು ಅವಕಾಶವಿಲ್ಲ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಬೇಕಾಗಿಲ್ಲ. ವೆಬ್ ಸೈಟ್‌ನಲ್ಲಿರುವುದು ಅಧಿಕೃತ ಮಾಹಿತಿಯೇ ಆಗಿರುವುದರಿಂದ ದೃಢೀಕರಿಸುವ ಅವಶ್ಯಕತೆ ಇರುವುದಿಲ್ಲ.
ಒಂದು ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು 150 ಶಬ್ದಗಳಲ್ಲಿ ಮಾತ್ರ ಕೇಳಬಹುದು. ಕಲಂ 2ಜೆ ಪ್ರಕಾರ ಕಚೇರಿಯ ದಾಖಲೆಗಳ ಪರಿವೀಕ್ಷಣೆಗೆ ಅವಕಾಶವಿದ್ದು, ಪ್ರತಿ ಅರ್ಧ ಗಂಟೆಗೆ 10 ರೂ.ಗಳಂತೆ ಶುಲ್ಕ ವಿಧಿಸಬಹುದು. ಮಾಹಿತಿಯನ್ನು ಕೇಳಿರುವ ಅರ್ಜಿದಾರನು ಅದಕ್ಕೆ ತಗಲುವ ಶುಲ್ಕವನ್ನು 90 ದಿನಗಳ ಒಳಗಾಗಿ ಭರಿಸಬೇಕು. ಅರ್ಜಿದಾರ ಹಣ ತುಂಬಿದ 21 ದಿನಗಳ ಒಳಗಾಗಿ ನಿಗದಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಮಾಹಿತಿಯನ್ನು ನೀಡುವುದು ವಿಳಂಬವಾದರೆ ದಂಡ ತೆರಬೇಕಾಗುತ್ತದೆ ಎಂದು ನಿವೃತ್ತ ಮಾಹಿತಿ ಆಯುಕ್ತರಾದ ಡಾ.ಡಾ.ಶೇಖರ ಸಜ್ಜನವರ ಹೇಳಿದರು. ಮಾಹಿತಿಯನ್ನು ನೀಡದಿರುವುದನ್ನು ಪ್ರಶ್ನಿಸಿ ನ್ಯಾಯಾಲಯ, ಗ್ರಾಹಕರ ವೇದಿಕೆ ಮತ್ತಿತರ ಕಡೆ ಹೋಗಲು ಕಾಯ್ದೆಯಡಿ ಅವಕಾಶವಿರುವುದಿಲ್ಲ ಎಂದು ಡಾ.ಸಜ್ಜನರ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net