

ರಾಜ್ಯದಲ್ಲಿ ಎಸ್‌ಡಿಪಿಐ ಬೆಂಬಲಿತ ತಾಲಿಬಾನ್ ಸರ್ಕಾರವನ್ನು ತರಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೊರಟಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಆರೋಪಿಸಿದರು.
ಎಸ್‌ಡಿಪಿಐ ಸಿದ್ದರಾಮಯ್ಯ ಅವರ ಮಾನಸ ದತ್ತು ಪುತ್ರ. ಇದು ಹಿಂದು, ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಂಘಟನೆ. ಇದರ ನೆರವಿನೊಂದಿಗೆ ತಾಲಿಬಾನಿ ಸರ್ಕಾರವನ್ನು ರಾಜ್ಯದಲ್ಲಿ ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸೋಲಿನ ಭಯದಿಂದ ಮುಸ್ಲಿಂ ಓಲೈಕೆ ಮಾಡುವ ಹಳೇ ತಂತ್ರಕ್ಕೆ ಕಾಂಗ್ರೆಸ್ ಮೊರೆಹೋಗಿದೆ. ಜತೆಗೆ, ನಿಷೇಧಿತ ಪಿಎಫ್‌ಐ ಸಂಘಟನೆ ರಾಜಕೀಯ ಅಂಗ ಸಂಸ್ಥೆಯಾದ ಎಸ್‌ಡಿಪಿಐ ಬೆಂಬಲವನ್ನು ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಹಿರಂಗವಾಗಿ ಕೋರಿದ್ದಾರೆ. ಇದರ ಅರ್ಥವೇನು? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಏನು ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಎಸ್‌ಡಿಪಿಐ ಬೆಂಬಲದೊಂದಿಗೆ ಕರ್ನಾಟಕವನ್ನು ಈ ಹಿಂದಿನ ಉತ್ತರಪ್ರದೇಶ, ಬಿಹಾರ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್‌ನ ರಾಜಕೀಯ ಸಂಘಟನೆಯೇ ಬಿಜೆಪಿ ಎಂಬುದು ನಿಜ. ನಮ್ಮನ್ನು ಸಂಘಿಗಳು, ಬಿಜೆಪಿ ಸಂಘ ಪರಿವಾರದ ರಹಸ್ಯ ಕಾರ್ಯಸೂಚಿಯನ್ನು ಜಾರಿ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಇದು ಸಹ ನಿಜ. ನಾವು ರಾಷ್ಟ್ರಪ್ರೇಮಿ ಸಂಘ ಪರಿವಾರದವರು. ಆದರೆ, ನಿಷೇಧಿತ ಸಂಘಟನೆಗಳ ಕಾರ್ಯಕರ್ತರ, ಸರಣಿ ಕೊಲೆಗಡುಕರ ಕ್ರಿಮಿನಲ್ ಪ್ರಕರಣ ರದ್ದು ಮಾಡುವವರಲ್ಲ ಎಂದು ಕಿಡಿಕಾರಿದರು.
ನಿಷೇಧಗೊಂಡಿದ್ದ ಸಿಮಿ, ಕೆಎಫ್‌ಡಿ ಪ್ರಮುಖರೇ ಪಿಎಫ್‌ಐ ಹುಟ್ಟು ಹಾಕಿದ್ದರು. ಅವರ ಎಸ್‌ಡಿಪಿಐ ರಾಜಕೀಯ ಬಣದ ಬೆಂಬಲವನ್ನು ಕಾಂಗ್ರೆಸ್ ಯಾಚಿಸಿರುವುದರ ಹಿಂದಿನ ಮನಸ್ಥಿತಿಯನ್ನು ಜನರು ತಿಳಿದಿರಬೇಕು. ಅಧಿಕಾರಕ್ಕಾಗಿ ಸಮಾಜದ್ರೋಹಿಗಳು, ಸಮಾಜಘಾತುಕ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದೆ. ಕರ್ನಾಟಕವನ್ನು ಕೇರಳ ಮಾಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ವರುಣ ಕ್ಷೇತ್ರದಲ್ಲಿ 15 ವರ್ಷಗಳ ಅಪ್ಪ-ಮಗನ ದರ್ಬಾರ್ ಈ ಸಲ ಅಂತ್ಯವಾಗಲಿದೆ. ಇಲ್ಲಿ ಬಿಜೆಪಿ ಘೋಷಿತ ಅಭ್ಯರ್ಥಿ ವಿ.ಸೋಮಣ್ಣ ಜಯ ಸಾಧಿಸಲಿದ್ದಾರೆ ಎಂದರು.
ವರುಣ ಕ್ಷೇತ್ರಕ್ಕೆ ಕರೆತಂದಿರುವ ವಿ.ಸೋಮಣ್ಣ ಅವರನ್ನು ಯಾರು ಬಲಿ ತೆಗೆದುಕೊಳ್ಳಲು ಆಗಲ್ಲ. 2015ರಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಠಿಣ ಸಂದರ್ಭದಲ್ಲಿ ಪಕ್ಷಕ್ಕೆ ಜಯವನ್ನು ಸೋಮಣ್ಣ ತಂದುಕೊಟ್ಟಿದ್ದಾರೆ. ಬಹಳಷ್ಟು ಜನರನ್ನು ಬಲಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಅವರೇ ಬಲಿಯಾಗಲಿದ್ದಾರೆ. ವರುಣ ಕ್ಷೇತ್ರದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ ಎಂದರು.