ರಾಜ್ಯದಲ್ಲಿ ಜನ, ದನಗಳಿಗೂ ರಕ್ಷಣೆ ಇಲ್ಲ

bjp-Kollegala-N.Mahesh
Published on

ಕೊಳ್ಳೇಗಾಲ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ, ಇಲ್ಲಿ ಜನಗಳಿಗೂ ರಕ್ಷಣೆ ಇಲ್ಲ. ದನಗಳು ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಳ್ಳರು ರಾಜಾರೋಷವಾಗಿ ಬ್ಯಾಂಕ್‌ಗಳಿಗೆ ನುಗ್ಗಿ ಹಣದೋಚಿ ಹೋಗುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ ಬೀದರ್ ಹಾಗೂ ಮಂಗಳೂರಿನಲ್ಲಿ ಘೋರ ಕಳ್ಳತನ ಕೃತ್ಯ ಸಂಭವಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲು ಸಮಯ ಸಿಗುತ್ತಿಲ್ಲವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಆದರೂ ಕಾಂಗ್ರೆಸ್ ನಾಚಿಕೆ ಇಲ್ಲದೆ ಆಡಳಿತ ಮುಂದುವರಿಸುತ್ತಿದೆ. ಮುಡಾ ಹಗರದಲ್ಲಿ 300 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೊದಲನೆ ಆರೋಪಿಯಾಗಿದ್ದಾರೆ. ಹೀಗಿದ್ದರೂ ಸಿಎಂ ಅಧಿಕಾರದಲ್ಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಸಂವಿಧಾನದ ಮೇಲೆ ಗೌರವಿದ್ದರೆ ರಾಜೀನಾಮೆ ನೀಡಿ ಪ್ರಕರಣವನ್ನು ಎದುರಿಸಲಿ ಎಂದು ಹೇಳಿದರು.

ರಾಜ್ಯದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದೆ. ಇಲ್ಲಿ ಜನಗಳಿಗೂ ರಕ್ಷಣೆ ಇಲ್ಲ, ದನಗಳಿಗೂ ಸುರಕ್ಷತೆ ಇಲ್ಲ, ಕಿಡಿಗೇಡಿಗಳು ಹಸುಗಳ ಕೆಚ್ಚಲು ಕೊಯ್ಯುತ್ತಿದ್ದಾರೆ. ಬಾಲ ಕತ್ತರಿಸುತ್ತಿದ್ದಾರೆ. ಜನಗಳು ಹಾಗೂ ದನಗಳು ಅಸುರಕ್ಷತೆಯಲ್ಲಿದ್ದಾರೆ. ಇಂತಹ ಸರ್ಕಾರ ಇರಬೇಕೆ ಎಂದು ಪ್ರಶ್ನಿಸಿದರು. ಅಲ್ಲದೆ, ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂ. ಲೂಟಿ ಆಗಿದೆ. ಇಷ್ಟೆಲ್ಲ ನಡೆದರೂ ಸಿಎಂ ರಾಜೀನಾಮೆ ನೀಡುತ್ತಿಲ್ಲ. ಕಾನೂನಿನ ಮೇಲೆ ಗೌರವವಿದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net