

ಚನ್ನಪಟ್ಟಣ : ಅಕ್ಷರವಂತ, ಪ್ರಜ್ಞಾವಂತ ಕರ್ನಾಟಕ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಜಿಪಂ ಹಾಗೂ ಶಿಕ್ಷಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಚೆನ್ನಾಗಿದೆ. ನಮ್ಮಲ್ಲಿ ಐಟಿಬಿಟಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಅತ್ಯುತ್ತಮವಾಗಿದೆ. ಇದಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಶಿಕ್ಷಣಕ್ಕಿಂತ ಮತ್ತೊಂದು ಸೇವೆ ಇಲ್ಲ. ಶಿಕ್ಷಕರ ಬಗ್ಗೆ ನನಗೆ ಅತೀವವಾದ ಗೌರವವಿದೆ ಎಂದು ತಿಳಿಸಿದರು.
ಹೈಟೆಕ್ ಶಾಲೆಗಳ ನಿರ್ಮಾಣ! : ಶಿಕ್ಷಣದ ಅಗತ್ಯತೆ ಹೆಚ್ಚಾಗಿದ್ದು, ಕುಟುಂಬ ಹಾಗೂ ಸಮಾಜದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ. ಉತ್ತಮ ಸೌಲಭ್ಯಗಳು ನಮ್ಮ ಗ್ರಾಮೀಣ ಮಕ್ಕಳಿಗೂ ಸಿಗಬೇಕು. ಈಗಾಗಲೇ ಕೆಲವು ಕಡೆ ಪಬ್ಲಿಕ್ ಶಾಲೆಗಳು ಆರಂಭ ಆಗಿವೆ. ವಿದ್ಯೆ ಹಾಗೂ ಉದ್ಯೋಗಕ್ಕಾಗಿ ಯಾರೂ ಬೆಂಗಳೂರಿಗೆ ಅಲೆಯಬಾರದು ಎಂಬುದು ನನ್ನ ಕನಸು. ನೀವಿರುವ ಜಾಗದಲ್ಲೇ ಉತ್ತಮ ವಿದ್ಯೆ ಕೊಡುವ ಕೆಲಸ ಮಾಡುತ್ತೇವೆ. ಈಗಾಗಲೇ ಸಿಎಸ್‌ಆರ್ ಹಣ ಶಿಕ್ಷಣಕ್ಕೆ ಮಾತ್ರ ಖರ್ಚಾಗಬೇಕು ಎಂಬ ನಿರ್ಧಾರ ಮಾಡಿದ್ದೇವೆ. ವರ್ಷಕ್ಕೆ 10 ಸಾವಿರ ಕೋಟಿ ರೂ. ಸಿಎಸ್‌ಆರ್ ಫಂಡ್ ಬರುತ್ತದೆ. ಬೇರೆ ಯಾವುದಕ್ಕೂ ಈ ಹಣ ಹೋಗಬಾರದು. 2000 ಹೈಟೆಕ್ ಶಾಲೆ ನಿರ್ಮಿಸಬೇಕು ಎಂಬುದು ನನ್ನ ಅಚಲವಾದ ನಿರ್ಧಾರ. ಮುಂದಿನ ಪೀಳಿಗೆಗೆ ಇದು ಅನುಕೂಲವಾಗಬೇಕು ಎಂದರು.
ಗುರುಭವನದ ಭರವಸೆ! : ಇದು ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ. ಆದರೆ, ಈ ಕ್ಷೇತ್ರದಲ್ಲಿ ಒಂದು ಗುರುಭವನ ಇಲ್ಲ ಎನ್ನುವುದು ಬೇಸರದ ವಿಚಾರ. ನಾವೇ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಈಗಾಗಲೇ ಈ ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿದ್ದೇನೆ. ಶೀಘ್ರದಲ್ಲೇ ಜಾಗ ಗುರುತು ಮಾಡಿ ಗುರುಭವನ ನಿರ್ಮಾಣ ಮಾಡಿಕೊಡುತ್ತೇನೆ. ಇದರೊಂದಿಗೆ, ಶಿಕ್ಷಕರಿಗಾಗಿಯೇ ಬಡಾವಣೆ ನಿರ್ಮಿಸಿ ಕೊಡುತ್ತೇವೆ ಎಂದು ಶಿಕ್ಷಕರಿಗೆ ಡಿಸಿಎಂ ಭರವಸೆ ನೀಡಿದರು.
ಸ್ವಂತ ಆಸ್ತಿಯನ್ನೇ ಸರ್ಕಾರಿ ಶಾಲೆಗೆ ಬರೆದುಕೊಟ್ಟುರುವೆ
ನಾನು ಮಾಜಿ ಸಿಎಂ, ಮಾಜಿ ಪ್ರಧಾನಿಗಳ ಬಗ್ಗೆ ಮಾತನಾಡಲ್ಲ. ನನ್ನ ತಾಲೂಕಿನಲ್ಲಿ ನನ್ನ ಸ್ವಂತ ಆಸ್ತಿಯನ್ನು ಸರ್ಕಾರಿ ಶಾಲೆಗೆ ಬರೆದುಕೊಟ್ಟಿದ್ದೇನೆ. ಕೋಡಿಹಳ್ಳಿಯಲ್ಲಿ 10 ಎಕರೆ, ದೊಡ್ಡಾಲಹಳ್ಳಿಯಲ್ಲಿ 10 ಎಕರೆ ಕೊಟ್ಟಿದ್ದೇನೆ. ಮಕ್ಕಳಿಗೆ ಶಿಕ್ಷಣ ಸಿಗಬೇಕು ಅಂತ ಸರ್ಕಾರಿ ಶಾಲೆಗೆ ಕೊಟ್ಟಿದ್ದೇನೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಿದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮಗೆ ಪ್ರಮೋಷನ್ ಇಲ್ಲ, ಲಂಚ ಇಲ್ಲ. ಆದರೂ ಸಮಾಜಕ್ಕೆ ನಿಮ್ಮದೇ ಆದ ಸೇವೆ ಮಾಡುತ್ತಿದ್ದೀರಿ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುತ್ತಿದ್ದೀರಿ ಎಂದು ಡಿಕೆಶಿ ಶ್ಲಾಸಿದರು.
ಎಲ್ಲ ತಂದೆ-ತಾಯಿಗೂ ನಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆ ಇರುತ್ತದೆ. ಆ ಆಸೆಯನ್ನು ಪೋಷಣೆ ಮಾಡೊದು ನೀವು. ಈ ಹಿಂದೆ ಗುರು ಶಿಷ್ಯನ ದಂಡಿಸಿ ವಿದ್ಯೆ ಕಲಿಸುತ್ತಿದ್ದರು. ಆದರೆ, ಈಗ ಗುರು ಶಿಷ್ಯರಿಗೆ ವಂದಿಸಿ ವಿದ್ಯೆ ಕಲಿಸುವ ಪರಿಸ್ಥಿತಿ ಬಂದಿದೆ. ಈಗ ಎಲ್ಲರೂ ಕಾಂಪಿಟೇಷನ್ ಯುಗದಲ್ಲಿ ನಡೆಯುತ್ತಿದೆ. ನಾನು ಓದುವಾಗ ನಮ್ಮ ಟೀಚರ್ ಒಂದಿಬ್ಬರಿಗೆ ಪಾಠ ಹೇಳಿ ಎಲ್ಲ ಮಕ್ಕಳಿಗೂ ಅವರಿಂದ ಪಾಠ ಮಾಡಿಸುತ್ತಿದ್ದರು.
ಈಗ ಫೋನ್‌ಗಳ ಮೂಲಕ ಎಲ್ಲ ಮಕ್ಕಳಿಗೆ ವಿಚಾರ ಗೊತ್ತಾಗುತ್ತದೆ. ನೀವು ತಪ್ಪು ಮಾಡಿದರೆ ಅವರೇ ನಿಮ್ಮನ್ನು ತಿದ್ದುವ ಪರಿಸ್ಥಿತಿ ಇದೆ. ನೀವು ಈಗ ಕೇವಲ ಚನ್ನಪಟ್ಟಣ, ರಾಮನಗರದ ಮಕ್ಕಳಿಗೆ ಪಾಠ ಮಾಡುತ್ತಿಲ್ಲ, ಗ್ಲೋಬಲ್ ಮಟ್ಟದಲ್ಲಿ ಪೈಪೋಟಿ ಮಾಡುವ ಬೆಂಗಳೂರು ಮಕ್ಕಳಿಗೆ ಪಾಠ ಮಾಡುತ್ತಿದ್ದೀರಿ. ಸಮಾಜಕ್ಕೆ ಕೃಷಿಕ, ಕಾರ್ಮಿಕ, ಸೈನಿಕ, ಶಿಕ್ಷಕ ನಾಲ್ಕು ಆಧಾರ ಸ್ತಂಭಗಳು. ನಿಮ್ಮ ಮೇಲೆಯೇ ಸಮಾಜ ನಿಂತುಕೊಂಡಿದೆ. ಹಾಗಾಗಿ, ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.
ಹುಟ್ಟಿರೋದು ಇಲ್ಲೇ ಸಾಯೋದು ಇಲ್ಲೆ : ನಾನು ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣಕ್ಕೆ ಬರುತ್ತಿಲ್ಲ. ನಾನು ಈ ಜಿಲ್ಲೆಯವನು, ಟೂರಿಂಗ್ ಟಾಕೀಸ್ ರೀತಿ ಎಲ್ಲ ಕಡೆ ಹೋಗಲ್ಲ. ನಾವು ಎಲ್ಲೇ ಇದ್ದೂ ಇಲ್ಲೇ ಬರಬೇಕು. ಹುಟ್ಟಿರೋದು ಇಲ್ಲೇ ಸಾಯೋದು ಇಲ್ಲೆ ಎಂದು ಡಿಕೆಶಿ ಹೇಳಿದರು.
ಡಿಕೆಶಿ ಕೈ ಬಲಪಡಿಸಿ! : ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೈ ಬಲಪಡಿಸಲು ಶಿಕ್ಷಕರಲ್ಲಿ ಮನವಿ ಮಾಡಿದರು. ಶಿಕ್ಷಕರು ಹೋರಾಟ ನಡೆಸಿದಾಗ ಬಿಜೆಪಿ ಕ್ಯಾರೇ ಎನ್ನಲಿಲ್ಲ. ಆದರೆ, ಶಿಕ್ಷಕರ ಬೆನ್ನಿಗೆ ನಿಂತಿದ್ದು, ಕಾಂಗ್ರೆಸ್. ಬೇರೆ ಜಿಲ್ಲೆಯವರನ್ನು ಅಧಿಕಾರಕ್ಕೆ ಏರಿಸಿದ್ದೇವೆ. ಚನ್ನಪಟ್ಟಣ ಗೆಲುವು ಅವರಿಗೆ ಶಕ್ತಿ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಬಿಇಒ ಮರೀಗೌಡ ಸೇರಿ ನಿವೃತ್ತ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ರಾಮೋಜಿಗೌಡ, ಬಿಎಂಐಸಿಎಪಿಎ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ, ಬಿಇಒ ರಾಮಲಿಂಗಯ್ಯ ಇದ್ದರು.