

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ದುರಾಡಳಿತ, ಡಿಸಿಎಂ ಡಿ.ಕೆ.ಶಿವಕುಮಾರ್ ದಬ್ಬಾಳಿಕೆ ಏನಿದ್ದರೂ ಲೋಕಸಭಾ ಚುನಾವಣೆವರೆಗೂ ಮಾತ್ರ. ಬಳಿಕ ನಿಲ್ಲಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ಹೇಳಿದರು.
ಹೊರವಲಯದ ತಿರುಮಲ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ, ಶ್ರೀರಾಮಮಂದಿರ ಲೋಕಾರ್ಪಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯಲ್ಲಿ ಸಂಗ್ರಹವಾಗುವ ಅಭಿನಂದನಾ ಪತ್ರ ರವಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೋಗಸ್ ಗ್ಯಾರಂಟಿಗಳಿಂದ ಯಾವುದೇ ಪ್ರಯೋಜನವಿಲ್ಲ. ಚುನಾವಣೆ ವೇಳೆ ಘೋಷಿಸಿದ್ದರಿಂದ ಎರಡ್ಮೂರು ಸಾವಿರ ಹಂತರದಿಂದ ನಾನೂ ಸೇರಿ ಬಿಜೆಪಿಯ ಹಲವರು ವಿಧಾನಸಭಾ ಚುನಾವಣೆ ವೇಳೆ ಸೋಲುಂಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ತಲಾ ಕೆ.ಜಿಗೆ 29 ರೂ.ನಂತೆ ಭಾರತ್ ರೈಸ್, ಗೋಧಿ ಹಿಟ್ಟು, 60 ರೂ.ಗೆ ತೊಗರಿಬೇಳೆ ಸೇರಿ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಯಾವ ಸರ್ಕಾರ ಕೊಟ್ಟಿದೆ ಎಂದು ಪ್ರಶ್ನಿಸಿದರು.
ಬಿ.ವೈ.ವಿಜಯೇಂದ್ರ ಅವರ ಸಾಮರ್ಥ್ಯ ಅರಿತು ರಾಜ್ಯಾಧ್ಯಕ್ಷ ಸ್ಥಾನ ವರಿಷ್ಠರು ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಆದ್ದರಿಂದ ನಮ್ಮೊಳಗಿನ ವೈಮನಸ್ಸು ಬದಿಗಿಟ್ಟು ಸಂಘಟಿತರಾಗಿ, ದೇಶದ ಒಳಿತಿಗಾಗಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸೋಣ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇಡೀ ವಿಶ್ವವೇ ಭಾರತದ ಲೋಕಸಭಾ ಚುನಾವಣೆಯತ್ತ ಕಣ್ಣಾಯಿಸಲಿದೆ. ಚೀನಾ, ಮಾಲ್ಡೀವ್ಸ್ ಹೊರತುಪಡಿಸಿ ಇನ್ನುಳಿದ ಎಲ್ಲ ರಾಷ್ಟ್ರಗಳ ಜನರಲ್ಲೂ ಮೋದಿ ಪ್ರಧಾನಿಯಾಗಬೇಕೆಂಬ ಆಸೆ ಇದೆ. ವಿರೋಧಿ ರಾಷ್ಟ್ರವಾದ ಪಾಕಿಸ್ತಾನದ ಯುವಕರು ಅವರಂತ ನಾಯಕತ್ವ ಬೇಕೆನ್ನುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲರ ಹಿತ ಕಾಯುವ ವಿಶ್ವಾಸ ಮೂಡಿಸಿದ್ದಾರೆ ಎಂದು ಹೇಳಿದರು.
ಕೇವಲ ಧಾರ್ಮಿಕ ಅಷ್ಟೇ ಅಲ್ಲ, ದೇಶದ ರಾಷ್ಟ್ರೀಯ ಹೆದ್ದಾರಿಗಳು, ವಿದ್ಯುದ್ದೀಕರಣ, ರೈಲ್ವೆ, ವಿಮಾನ ನಿಲ್ದಾಣ, ಶೌಚ ಗೃಹ, ವಸತಿ ಸೌಲಭ್ಯ ಸೇರಿ ಅಭಿವೃದ್ಧಿಯಲ್ಲಿ ಮೋದಿ ಕೊಡುಗೆ ಅಪಾರ. ಇನ್ನೂ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಒಂದೇ ರಾಷ್ಟ್ರ, ಒಂದೇ ಪ್ರಧಾನಿ, ಒಂದೇ ಸಂವಿಧಾನವೆಂದು ಸಾಬೀತುಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಪಟ್ಟಿ ಬಹುದೊಡ್ಡದಿದೆ ಎಂದರು.
ದೇಶದ ಹಣಕಾಸು ಆಯೋಗ ತೆಗೆದುಕೊಳ್ಳುವ ಕೆಲ ನಿರ್ಧಾರಗಳಲ್ಲಿ ಕೇಂದ್ರದ ಹಣಕಾಸು ಸಚಿವರು ಮಧ್ಯ ಪ್ರವೇಶಿಸುವಂತಿಲ್ಲ. ಹೀಗಿರುವಾಗ ರಾಜ್ಯದ ಪಾಲು ನೀಡಿಲ್ಲವೆಂದು ಕೈ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆಗಿದ್ದರೆ, ಮನಮೋಹನ್ ಸಿಂಗ್, ಮೋದಿ ಅವರ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ನಾಲ್ಕು ನೂರು ಸೀಟು ಖಚಿತ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸೇರಿ ಎನ್‌ಡಿಎ ಒಕ್ಕೂಟ 400 ಸೀಟು ಪಡೆಯಲಿದೆ ಎಂದು ವಿಪಕ್ಷಗಳ ನಾಯಕರೇ ಹೇಳುತ್ತಿದ್ದಾರೆ ಎಂದು ಜಿಲ್ಲಾ ಸಹ ಪ್ರಭಾರಿ ಪ್ರೇಮ್‌ಕುಮಾರ್ ಹೇಳಿದರು.
ಶ್ರೀರಾಮಮಂದಿರ ಲೋಕಾರ್ಪಣೆ ಬಳಿಕ ಇಡೀ ದೇಶದಲ್ಲೇ ವಾಸ ವಾತಾವರಣ ಸೃಷ್ಟಿಯಾಗಿದೆ. ಈ ದೇಗುಲ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗಲಿದೆ. ರಾಮರಾಜ್ಯದ ಕಡೆ ಪಯಣ ಸಾಗಲಿದೆ. ಆದರೆ, ಸಂಸದ ಡಿ.ಕೆ.ಸುರೇಶ್ ಹೇಳಿಕೆಯೂ ಭಾರತ್ ಜೋಡೋ ಬದಲು ತೋಡೋಗೆ ಕಾಂಗ್ರೆಸ್ ಮುಂದಾಗಿದೆ ಎಂಬುದಕ್ಕೆ ನಿದರ್ಶನ. ರಾಜ್ಯ ಸರ್ಕಾರದ ವೈಫಲ್ಯ ಜನರಿಗೆ ತಿಳಿಸಿ, ಮೋದಿ ಕೈ ಬಲಗೊಳಿಸಲು ಮುಂದಾಗಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮಾಜಿ ಸಂಸದ ಜನಾರ್ದನಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಎಂ.ಸುರೇಶ್, ಅನಿಲ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎಸ್.ಸಂಪತ್‌ಕುಮಾರ್, ಬಾಳೇಕಾಯಿ ರಾಮದಾಸ್, ಜಿ.ಟಿ.ಸುರೇಶ್ ಸಿದ್ದಾಪುರ ಇತರರಿದ್ದರು.