ರಾಜ್ಯದಲ್ಲಿ ಕಾಂಗ್ರೆಸ್​​ಗೆ ಮತ್ತೆ ಅಧಿಕಾರ

Capture
Published on

ಬೀದರ್: ಪಂಚರಾಜ್ಯಗಳ ಚುನಾವಣೆ ಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರುವುದು ಪಕ್ಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿ, ಪಂಚ ರಾಜ್ಯ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ಪಕ್ಷದ ಸದಸ್ಯರೇ ನಮ್ಮ ದೊಡ್ಡ ಶಕ್ತಿ. ಹಲವು ವರ್ಷಗಳ ನಂತರ ಸದಸ್ಯತ್ವ ಅಭಿಯಾನ ಆರಂಭಿಸಿದ್ದು, ಒಂದು ವಾರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಸಚಿವ ಸುದರ್ಶನ ನಾಚಿಯಪ್ಪ, ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್ ಮಾತನಾಡಿದರು. ಅಭಿಯಾನದ ರಾಜ್ಯ ಎಪಿಆರ್ಒ ಮೋತಿಲಾಲ್ ದೇವಕಲ್, ಎಂಎಲ್ಸಿ ಅರವಿಂದಕುಮಾರ ಅರಳಿ, ಮಾಜಿ ಶಾಸಕರಾದ ಅಶೋಕ ಖೇಣಿ, ವಿಜಯಸಿಂಗ್, ವೆಂಕಟೇಶ, ರಘುನಂದನ್, ಸುರೇಶ ಹೆಗಡೆ, ಮಾಲಾ ನಾರಾಯಣ, ನರಸಿಂಗರಾವ ಸೂರ್ಯವಂಶಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ ಇತರರಿದ್ದರು.

ಬೀದರ್ ಕಾಂಗ್ರೆಸ್ ಬಗ್ಗೆ ಡಿಕೆಶಿ ಅಸಮಾಧಾನ
ಬೀದರ್ ಜಿಲ್ಲೆಯಲ್ಲಿ ಡಿಜಿಟಲ್ ಸದಸ್ಯತ್ವ ಸಮಧಾನಕರವಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಬೇಸರ ವ್ಯಕ್ತಪಡಿಸಿದರು. ಭಾಲ್ಕಿ ಕ್ಷೇತ್ರದಲ್ಲಿ 20 ಸಾವಿರ ನೋಂದಣಿ ಆಗಿದ್ದು, ಸಮಾಧಾನದ ವಿಷಯ. ಆದರೆ ಏಳು ಜನ ಟಿಕೆಟ್ ಕೇಳುವ ಬಸವಕಲ್ಯಾಣ ಕ್ಷೇತ್ರದಲ್ಲಿ ಕೇವಲ 7600 ಸದಸ್ಯತ್ವ ಆಗಿದೆ. 40 ಸಾವಿರ ಸದಸ್ಯತ್ವ ಮಾಡಿ ಟಿಕೆಟ್ ಕೇಳಿದರೆ ಕಿಮ್ಮತ್ತು ಇರುತ್ತದೆ ಎಂದರು. ಶಾಸಕ ರಹೀಮ್ ಖಾನ್ ಕ್ಷೇತ್ರವಾದ ಬೀದರ್ ಉತ್ತರದಲ್ಲಿ ಕೇವಲ 7400 ನೋಂದಣಿ ಆಗಿದ್ದು, ಅವರು ನನ್ನ ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಇನ್ನೂ ಪಕ್ಷದ ಶಾಸಕರಿಲ್ಲದ ಔರಾದ್ ಕ್ಷೇತ್ರದಲ್ಲಿ 17 ಸಾವಿರಕ್ಕೂ ಅಧಿಕ ಸದಸ್ಯತ್ವ ಆಗಿದೆ. ಹುಮನಾಬಾದ್ನಲ್ಲೂ 17 ಸಾವಿರ ಆಗಿದ್ದು, ಇನ್ನಷ್ಟು ಹೆಚ್ಚಾಗಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net