

ಕುಶಾಲನಗರ: ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಲ್ಲ ಕಾಮಗಾರಿಗಳಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕುಶಾಲನಗರ ಸಮೀಪದ ತೊರೆನೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಡಾ.ಮಂಥರ್ ಗೌಡ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮತದಾರರು ದಡ್ಡರಲ್ಲ ಬುದ್ಧಿವಂತರು, ಪ್ರಜ್ಞಾವಂತರು. ಈ ಬಾರಿ ಬದಲಾವಣೆ ಬಯಸಿದ್ದು, ವಿದ್ಯಾವಂತ ಯುವಕನ ಪರ ಮತ ಚಲಾಯಿಸಲಿದ್ದಾರೆ ಎಂಬ ನಂಬಿಕೆ ಇದೆ. 5 ಬಾರಿ ಆಯ್ಕೆಯಾದರೂ ತೊರೆನೂರು ಗ್ರಾಮಕ್ಕೆ ಯಾವುದೇ ಶಾಶ್ವತ ಯೋಜನೆ ರೂಪಿಸುವಲ್ಲಿ ಕ್ಷೇತ್ರ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.
ಕಳೆದ ಇಪ್ಪತ್ತೈದು ವರ್ಷ ನೀವು ಅಪ್ಪಚ್ಚುರಂಜನ್ ಅವರಿಗೆ ಶಾಸಕರಾಗಿ ಆಯ್ಕೆಯಾಗಲು ಆಶೀರ್ವಾದ ಮಾಡಿದ್ದಿರಿ. ಆದರೆ ಇಷ್ಟು ವರ್ಷ ರಸ್ತೆಗೆ ಡಾಂಬರು ಹಾಕಿಸಲು ಸಾಧ್ಯವಾಗದೆ ಚುನಾವಣೆ ಹತ್ತಿರ ಬಂದಾಗ ಡಾಂಬರು ಹಾಕಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ರಾಜ್ಯ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿದರು. ಎಪಿಸಿಎಂಎಸ್ಸಿ ಮಾಜಿ ಉಪಾಧ್ಯಕ್ಷ ಟಿ.ಬಿ.ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಪ್ರಗತಿಪರ ರೈತ ಶಾಂತಪ್ಪ ನೇತೃತ್ವದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮಂಥರ್ ಗೌಡ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಸದಸ್ಯ ನಂಟೇಶ್ ಗೌಡ, ಜಿಲ್ಲಾ ಚುನಾವಣಾ ಉಸ್ತುವಾರಿ ಮಂಜುನಾಥ್ ಗುಂಡೂರಾವ್, ಡಿಸಿಸಿ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಮುಖಂಡರಾದ ಬಿ.ಎಸ್.ಚಂದ್ರಶೇಖರ್, ಎಸ್.ಎನ್.ರಮೇಶ್, ಟಿ.ಜಿ.ಲೋಕೇಶ್, ತೊಂಟೇಶ್, ಚಂದ್ರಶೇಖರ್, ವಸಂತ, ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಎಸ್.ಎಸ್.ಚಂದ್ರಶೇಖರ್, ನಿಂಗಾಜಮ್ಮ ಇದ್ದರು.