ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾದಿಭಾಗ್ಯ ಮರು ಜಾರಿ: ಸಿದ್ದರಾಮಯ್ಯ

Siddaramaiah
Published on

ಮೈಸೂರು: ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿರುವ ಶಾದಿಭಾಗ್ಯ ಸೇರಿದಂತೆ ಎಲ್ಲ ಯೋಜನೆಗಳನ್ನು ಮರುಜಾರಿಗೊಳಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಜೆಕೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನೀಡಿದ ಒಟ್ಟು 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಮಾತ್ರವಲ್ಲ 30 ಹೊಸ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಆದರೆ, ಬಿಜೆಪಿ ಸರ್ಕಾರ ನಮ್ಮ ಸರ್ಕಾರದ ಅವಧಿಯ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಯೋಜನೆಗಳನ್ನು ಮರುಜಾರಿಗೊಳಿಸಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ 11, ಚಾಮರಾಜನಗರ ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳು ಇದ್ದು, ಈ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಬಿಜೆಪಿ, ಜೆಡಿಎಸ್‌ನವರು ಏನೇ ಹೇಳಲಿ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಬಿಜೆಪಿಯ ಜನವಿರೋಧಿ ನೀತಿ ಹಾಗೂ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದು, ಸರ್ಕಾರ ತೊಲಗಿದರೆ ಸಾಕು ಎಂಬ ಅಭಿಪ್ರಾಯ ಜನರಲ್ಲಿ ಇದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅನೈತಿಕ ಮಾರ್ಗದ ಮೂಲಕ ಅಧಿಕಾರ ಪಡೆದಿದೆ. ಅವರಿಗೆ ಜನಾಶೀರ್ವಾದ ಇಲ್ಲದೆ ಇದ್ದರೂ ಆಪರೇಷನ್ ಕಮಲದ ಮೂಲಕ ಕೋಟ್ಯಾಂತರ ರೂ. ನೀಡಿ ಶಾಸಕರನ್ನು ಖರೀದಿಸಿದರು. ನಮಗೆ ಕಳೆದ ಬಾರಿ ಕಡಿಮೆ ಸ್ಥಾನಗಳು ದೊರೆತರೂ ಬಿಜೆಪಿಗಿಂತ ಹೆಚ್ಚು ಮತವನ್ನು ಗಳಿಸಿದ್ದೇವೆ. ಆ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಕಾನೂನು ಸುವ್ಯವಸ್ಥೆ ಹದಗೆಡುತ್ತದೆ, ಕೋಮುವಾದ ಹೆಚ್ಚಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕಳೆದ ಬಾರಿ ನಾವು ಜೆಡಿಎಸ್‌ಗೆ ಅಧಿಕಾರ ನೀಡಿದೆವು. ಆದರೆ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಕೆಲವು ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು. ಬಿಜೆಪಿಗೆ ನಾನು ಕಾಂಗ್ರೆಸ್‌ನ 14 ಶಾಸಕರನ್ನು ಕಳುಹಿಸಿದೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಜೆಡಿಎಸ್‌ನ ಮೂವರು ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದು ಕುಮಾರಸ್ವಾಮಿನಾ? ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಎರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆ ಸಂದರ್ಭ ಅವರಿಗೆ ಪಂಚರತ್ನ ನೆನಪಾಗಿಲ್ಲವೇ? ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿಯೇ ಕಾರಣ. ಕೋಮುವಾದಿಗಳ ಜತೆ ಅಧಿಕಾರ ಹಂಚಿಕೊಂಡವರಿಗೆ ಜಾತ್ಯಾತೀತ ಎಂದು ಹೇಳಲು ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.

ಜೆಡಿಎಸ್ ಒಂದು ವಿಶ್ವಾಸಾರ್ಹ ಪಕ್ಷವಲ್ಲ, ಅವರ ಜತೆ ಹೊಂದಾಣಿಕೆ ಬೇಡ ಎಂದು ನಾನು ಹೈಕಮಾಂಡ್‌ಗೆ ಹೇಳಿದ್ದೆ. ಆದರೆ, ಹೈಕಮಾಂಡ್ ಕೇಳದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಅವರಿಗೆ ಯಾವುದೇ ತತ್ವ, ಸಿದ್ಧಾಂತವಿಲ್ಲ. ಅವರು ಗೆದ್ದ ಎತ್ತಿನ ಬಾಲ ಹಿಡಿಯುವವರು. ಹೀಗಾಗಿ ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಮತದಾರರು ಮತ ನೀಡಬಾರದು.ಒಂದುವೇಳೆ ನೀಡಿದರೆ ಅದು ಬಿಜೆಪಿಗೆ ಮತ ಹಾಕಿದಂತೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯ ಉದಯಿಸುವಷ್ಟೇ ಸತ್ಯ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಬಸವಾದಿ ಶರಣರ ತತ್ವದ ಮೇಲೆ ನಂಬಿಕೆ ಇಟ್ಟವರು ನಾವು. ನಮ್ಮನ್ನು ನಂಬಿ, ನಮ್ಮ ಮೇಲೆ ವಿಶ್ವಾಸವಿಡಿ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹೋದರೆ ರಾಜಕೀಯದಿಂದ ನಿವೃತ್ತಿ ಪಡೆದು ಸನ್ಯಾಸದೀಕ್ಷೆ ಸ್ವೀಕರಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net