

ತುಮಕೂರು: ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವನ್ನು ಎಲ್ಲೆಡೆ ಕಾಣಿಸುವ ಮತ್ತು ಕೇಳಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು. ಆಡಳಿತ ಭಾಷೆಯಾದ ಕನ್ನಡ ಭಾಷೆಯಲ್ಲಿ ನಮ್ಮ ಬದುಕಿದೆ, ಜೀವನ ಕ್ರಮವಿದೆ ಮತ್ತು ನಮ್ಮೆಲ್ಲರ ಭವಿಷ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕಚೇರಿಗಳಲ್ಲಿನ ಕನ್ನಡ ಬಳಕೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡ ಟಕ ಕಾರ್ಯನಿರ್ವಹಿಸಬೇಕು. ಕನ್ನಡ ಬಳಕೆ ಸುಗಮವಾಗಿ ಸಾಗುವ ರೀತಿ ನೋಡಿಕೊಳ್ಳುವ ಜವಾಬ್ದಾರಿಯಿದೆ ಎಂದರು. ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕಾ ವಲಯಗಳಲ್ಲಿ ಕನ್ನಡ ಟಕ ಸ್ಥಾಪನೆ ಮತ್ತು ಕಡ್ಡಾಯ ಕನ್ನಡ ಬಳಸುವಿಕೆ ಕುರಿತಂತೆ ಕಟ್ಟುನಿಟ್ಟಾದ ನಿರ್ದೇಶನ ನೀಡುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗೇಶ್ಗೆ ಸೂಚಿಸಿದರು. ಇನ್ನೊಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕೆಗಳಲ್ಲಿ ಈ ಬದಲಾವಣೆ ತರಬೇಕು ಎಂದು ಸೂಚಿಸಿದ ಅವರು, ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ಎಲ್ಲ ಸರ್ಕಾರಿ ಇಲಾಖೆ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೇ ಪತ್ರ ವ್ಯವಹಾರ ನಡೆಯಬೇಕು ಎಂದರು. ಎರಡು ತಿಂಗಳೊಳಗಾಗಿ ಸ್ಮಾರ್ಟ್ಸಿಟಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿ&ಮುಂಗಟ್ಟುಗಳು ಮತ್ತು ಎಲ್ಲಾ ಸಂಸ್ಥೆಗಳ ನಾಮ ಫಲಕಗಳಲ್ಲಿ ಕನ್ನಡ ಬಳಸಿರಬೇಕು. ಸ್ಮಾರ್ಟ್ಸಿಟಿ ಯೋಜನೆಯ ಎಲ್ಲ ಕಾಮಗಾರಿ, ಆದೇಶ, ಸುತ್ತೋಲೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ 348 ಬ್ಯಾಂಕುಗಳ ಪೈಕಿ 300 ಬ್ಯಾಂಕ್ಗಳಲ್ಲಿರುವ ವ್ಯವಸ್ಥಾಪಕರು ಕನ್ನಡ ಬಳಸುತ್ತಿದ್ದು, 48 ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ಕನ್ನಡ ತರಬೇತಿ ನೀಡಲಾಗಿದೆ ಎನ್ನಲಾಗಿದ್ದು, ಅವರು ಕನ್ನಡ ಬಳಸುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ ಎಂದರು. ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನವಾಗಬೇಕು, ಜಾಲತಾಣದ ತಂತ್ರಾಂಶಗಳು ಪೂರ್ವ ನಿಯೋಜಿತವಾಗಿ ಕನ್ನಡದಲ್ಲಿಯೇ ಇರಬೇಕು, ಇ&ಆಡಳಿತ ತಂತ್ರಾಂಶದಲ್ಲಿ 6ಲಕ್ಷ ಪದ ಸಂಗ್ರಹಣೆಯ ಮಾಹಿತಿಯುಳ್ಳ ಪದ ಕಣಜ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಒಟ್ಟು 68 ನಿಂಟು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಆಪ್ತ ಕಾರ್ಯದರ್ಶಿ ಎನ್.ಮಹೇಶ್, ಡಿಎಚ್ಒ ಡಾ.ನಾಗೇಂದ್ರಪ್ಪ, ಡಿಡಿಪಿಐ ಸಿ.ನಂಜಯ್ಯ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಇದ್ದರು.
ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶೇ.100 ಕನ್ನಡ ಬಳಕೆಯಾಗುತ್ತಿದೆ. ಎಲ್ಲ ಸುತ್ತೋಲೆಗಳು, ನಡಾವಳಿಗಳು, ಕಡತವನ್ನೂ ಕನ್ನಡದಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ