

ಚಿತ್ರದುರ್ಗ: ದೇಶದ ಶಿಕ್ಷಣ ವ್ಯವಸ್ಥೆ ಆರಂಭದಿಂದಲೂ ಬ್ರಿಟಿಷ್ ವಸಾಹತುಶಾಹಿ ಪದ್ಧತಿ ಮುಂದುವರಿದಿದ್ದು, ಭಾರತೀಯತೆಯ ಅಂಶ ಸೇರ್ಪಡೆಯೊಂದಿಗೆ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಹಂತದಲ್ಲೇ ರದ್ದುಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಈ ನಿರ್ಧಾರ ಶಿಕ್ಷಣ ವಿರೋಧಿ, ಪೂರ್ವಾಗ್ರಹ ಪೀಡಿತ, ರಾಜಕೀಯ ಪ್ರೇರಿತ, ನಾಡಿನ ವಿದ್ಯಾರ್ಥಿಗಳ ಹಿತಕ್ಕೆ ಮಾರಕ ಎಂದು ದೂರಿದರು. ತನ್ನ ನಿಲುವು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಕೇಂದ್ರ ಸರ್ಕಾರ ದೇಶಾದ್ಯಂತ ಶಿಕ್ಷಣ ಕ್ಷೇತ್ರದ ತಜ್ಞರೊಂದಿಗೆ ನಿರಂತರ ಸಂವಹನ, ಮಾಹಿತಿ ವಿನಿಮಯ, ಚರ್ಚೆ ನಡೆಸಿದ ಬಳಿಕ ಈ ನೀತಿ ರೂಪಿಸಿದೆ. ಈಗ ವಿರೋಧಿಸುವವರು ಆ ವೇಳೆ ಏಕೆ ಅಭಿಪ್ರಾಯ ಮಂಡಿಸಲಿಲ್ಲ ಎಂದು ಪ್ರಶ್ನಿಸಿದರು.
ಎನ್‌ಇಪಿ ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಶಿಸ್ತಿನ ಅಧ್ಯಯನಕ್ಕೆ, ಕೌಶಲಾಧಾರಿತ ಶಿಕ್ಷಣಕ್ಕೆ, ದೇಶದ ಬಹುಭಾಷಿಕ ಹಾಗೂ ಸಾಂಸ್ಕೃತಿಕ ಬಹುತ್ವಕ್ಕೆ, ಪ್ರಾಂತೀಯ-ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯತೆ ನೀಡಿ ರಚಿಸಲಾಗಿದೆ. ಹೀಗಿದ್ದರೂ ಸಾಧಕ-ಭಾದಕಗಳ ಕುರಿತು ಚರ್ಚಿಸದೆ, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸದೆ ರದ್ದತಿ ಘೋಷಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಇಪಿ ಆಧಾರದ ಶಿಕ್ಷಣದಲ್ಲಿ ಐಐಟಿ, ಐಐಎಂ, ಐಐಎಸ್‌ಸಿ, ಕೇಂದ್ರೀಯ ವಿವಿಗಳು ಸೇರಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಎಲ್ಲೆಡೆಯ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕು. ತ್ರಿಶಂಕು ಸ್ಥಿತಿ ಮಾಡುವ ಪ್ರಯತ್ನವೇ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿ ದೂಡಬೇಡಿ. ರಾಜಕೀಯ ಪ್ರೇರಿತ, ಸ್ವಾರ್ಥ ಸಾಧನೆಯ ವಸ್ತುವಾಗಿಸದೆ, ಸಂಕುಚಿತತೆಗೆ ಒಳಗಾಗದೆ ಶೈಕ್ಷಣಿಕ ದೃಷ್ಟಿಯಿಂದ ಎನ್‌ಇಪಿ ಪರಾಮರ್ಶನ ನಡೆಸಬೇಕು. ಸಣ್ಣ-ಪುಟ್ಟ ದೋಷ ಕಂಡುಬಂದಲ್ಲಿ ಸರಿಪಡಿಸಲು ಪ್ರಯತ್ನಿಸಬೇಕು. ವಿರೋಧಿ ನಿಲುವಿನಿಂದ ಹೊರಬರಬೇಕು ಎಂದು ಕೋರಿದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಪ್ರಾಂತ ಕಾರ್ಯ ಸಮಿತಿ ಆದರ್ಶ್, ಜಿಲ್ಲಾ ಸಂಚಾಲಕರಾದ ಸಿದ್ದೇಶ್, ಕನಕರಾಜ್, ಮನೋಜ್, ಭರತ್, ನಗರ ಕಾರ್ಯದರ್ಶಿ ಗೋಪಿ ಇತರರಿದ್ದರು.