ರಾಜ್ಯದಲ್ಲಿ ಎಡಪಂಥೀಯರ ಆಡಳಿತ: ಬಿ.ಎಲ್​. ಸಂತೋಷ್​

udp-30-bjp 2
Published on

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತ ನಡೆಸುತ್ತಿಲ್ಲ. ತೀರಾ ಎಡಪಂಥೀಯ ಸರ್ಕಾರ ಅಸ್ತಿತ್ವದಲ್ಲಿದ್ದು, ಹಿಂದೂ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಹೇಳಿದ್ದಾರೆ.

ಗುರುವಾರ ಉಡುಪಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ ಅಂಗವಾಗಿ ನಡೆದ ಘಟ ನಾಯಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದ ಅನೇಕ ರಾಜ್ಯಗಳು ಎನ್​ ಇ ಪಿ ಜಾರಿಗೊಳಿಸಿವೆ. ಆದರೆ ರಾಜ್ಯದಲ್ಲಿ ಎಸ್​ ಇ ಪಿ ಜಾರಿ ಮಾಡುತ್ತೇವೆ ಎಂದವರು ಈವರೆಗೆ ಸಮಿತಿಯನ್ನು ರಚಿಸಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗಳಿಗೆ ಹಿಂದೂ ವಿರೋಧಿ, ರಾಷ್ಟ್ರೀಯತೆ ವಿರೋಧಿಗಳನ್ನು ನೇಮಕ ಮಾಡಲಾಗಿದೆ. ಇದೆಲ್ಲವನ್ನೂ ವಿರೋಧಿಸಲು ವಿರೋಧಪಕ್ಷ ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಕಾಂಗ್ರೆಸ್​ ಶಾಸಕರಿಗೂ ಅನುದಾನ ಸಿಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ದುಡ್ಡಿಲ್ಲ. ಅನ್ನಭಾಗ್ಯ ಯೋಜನೆ ಹಣ 3 ತಿಂಗಳಿನಿಂದ ಬಂದಿಲ್ಲ. ಚುನಾವಣಾ ಗೆಲುವಿಗಾಗಿ ಮುಂದಾಲೋಚನೆ ಇಲ್ಲದೆ ಭರವಸೆಗಳನ್ನು ನೀಡಿದ ಪರಿಣಾಮ ಕಾಣುತ್ತಿದ್ದು, ತೆಲಂಗಾಣದಲ್ಲೂ ಇದೇ ಪರಿಸ್ಥಿತಿ ಇದೆ ಎಂದರು.

ಒನ್​ ನೇಶನ್​ ಒನ್​ ಎಲೆಕ್ಷನ್​ ನಿಶ್ಚಿತ
ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಆಡಳಿತ ವ್ಯವಸ್ಥೆ ಸರಾಗವಾಗಿ ನಡೆಯುವುದಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 3ನೇ ಆಡಳಿತ ಕಾಲದಲ್ಲಿ ಒನ್​ ನೇಶನ್​ ಒನ್​ ಎಲೆಕ್ಷನ್​ ಪ್ರಮುಖ ಅಜೆಂಡಾವಾಗಿದ್ದು, 5 ವರ್ಷಕ್ಕೆ ಒಂದು ಅಥವಾ 2 ಚುನಾವಣೆಗಳು ನಡೆಯಲಿವೆ ಎಂದು ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸುನೀಲ್​ ಕುಮಾರ್​, ಗುರುರಾಜ್​ ಗಂಟಿಹೊಳೆ, ಯಶ್ಪಾಲ್​ ಸುವರ್ಣ, ವಿಧಾನ ಪರಿಷತ್​ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಮಂಗಳೂರು ವಿಭಾಗ ಪ್ರಭಾರಿ ಉದಯ್​ ಕುಮಾರ್​ ಶೆಟ್ಟಿ, ವಕ್ತಾರ ವಿಕಾಸ್​ ಪುತ್ತೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿ, ರೇಶ್ಮಾ ಉದಯ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net