ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಖಚಿತ

24 HANUR 3
Published on

ಹನೂರು: ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಅರ್.ನರೇಂದ್ರ ವಿಶ್ವಾಸವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷ. ಎಲ್ಲ ವರ್ಗದವರಿಗೂ ಸಮಾನ ಅವಕಾಶವನ್ನು ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು ಹಾಗೂ ಕೃಷಿಕರಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತವನ್ನು ನೀಡಿದ್ದು, ಜನಮನ್ನಣೆ ಗಳಿಸಿದೆ ಎಂದರು.

ಈತನ್ಮಧ್ಯೆ ಈ ಅವಧಿಯಲ್ಲಿ ಹನೂರು ಕ್ಷೇತ್ರಕ್ಕೆ 3.5 ಸಾವಿರ ಕೊಟಿ ರೂ. ಅನುದಾನ ದೊರಕಿದ್ದು, ಎಸ್ಸಿ, ಎಸ್ಟಿ ಕಾಲನಿಗಳಿಗೆ ಅಗತ್ಯ ಮೂಲಸೌಕರ್ಯ, ಸಮುದಾಯ ಭವನ ನಿರ್ಮಾಣ, ಹನೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, 1,800 ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಕ್ಕುಪತ್ರ ವಿತರಣೆ, ಕೆ.ಶಿಫ್ ಯೋಜನೆ ಅನುಷ್ಠಾನ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಈ ಬಗ್ಗೆ ಕ್ಷೇತ್ರದ ಜನರಿಗೂ ತಿಳಿದಿದೆ. ಹಾಗಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಒಲವಿದ್ದು, ಮುಂಬರುವ ಚುನಾವಣೆಯಲ್ಲೂ ಹನೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಮತ್ತೆ ಸಾಬೀತು ಪಡಿಸಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ: ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದ ಕೆಲವರು ಕಾರಣಾಂತರದಿಂದ ಇತರ ಪಕ್ಷದ ಮೊರೆ ಹೋಗಿದ್ದರು. ಆದರೆ ಆ ಪಕ್ಷದಲ್ಲಿನ ಆಂತರಿಕ ಕಾರ್ಯವೈಖರಿಯಿಂದ ಬೇಸತ್ತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಕಾಂಗ್ರೆಸ್ ವರ್ಚಸ್ಸು. ಜತೆಗೆ ನಮ್ಮ ಮನೆತನದೊಂದಿಗೆ ಹೊಂದಿದ್ದ ಒಡನಾಟ. ಹಾಗೆಯೇ ನಿಮ್ಮ ಸಹಕಾರದಿಂದ ಸತತ 3 ಬಾರಿ ಜಯ ಗಳಿಸಿದ್ದು, ಉತ್ತಮ ಸೇವೆ ಮಾಡಿದ್ದೇನೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಗಾಜನೂರು ಸಮೀಪದ ಕರಿಬೇವಿನದೊಡ್ಡಿ ಗ್ರಾಮದ ದೊಡ್ಡಮರಿಗೌಡ, ಗೋವಿಂದ, ಮಾದೇಗೌಡ, ಪೂಜಾರಿಗೌಡ, ಭದ್ರೇಗೌಡ, ಪಳನಿಯಪ್ಪ, ಜೋಗಿಗೌಡ, ಮಹದೇವ ತಮ್ಮಡಿ, ಕೃಷ್ಣಮೂರ್ತಿ, ರವಿಕುಮಾರ್, ವೆಂಕಟರಾಜು, ಕೃಷ್ಣೇಗೌಡ, ಬಸವಣ್ಣ ಹಾಗೂ ಮುರುಗೇಶ್ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜು, ಪ.ಪಂ. ಉಪಾಧ್ಯಕ್ಷ ಗಿರೀಶ್, ದಿನ್ನಳ್ಳಿ ಗ್ರಾ.ಪಂ. ಅಧ್ಯಕ್ಷ ಮುರುಗೇಶ್, ಮುಖಂಡರಾದ ಉದ್ದನೂರು ಸಿದ್ದರಾಜು, ಮಾದೇಶ್, ರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net