ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಅಧಿಕ

CTD 25 ARJUNA--01
Published on

ಚಿತ್ರದುರ್ಗ: ಅರಣ್ಯದ ಜತೆಗೆ ಅಮೂಲ್ಯ ಜೀವಸಂಕುಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಅರ್ಜುನ ಆನೆ ಸ್ಮರಣಾರ್ಥ ನಗರದ ದುರ್ಗಾ ಇಲೆವೆನ್ ಕ್ರಿಕೆಟರ್ಸ್‌ ನಗರದ ಹಳೆಯ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಐದು ದಿನಗಳ ರಾಜ್ಯಮಟ್ಟದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದರು.
ಅನೇಕ ವರ್ಷಗಳಿಂದ ಮಾನವ ಹಾಗೂ ವನ್ಯಜೀವಿ ಸಂಘರ್ಷ ನಡೆಯುತ್ತಿದೆ. ಅರಣ್ಯವನ್ನು ಕಾಪಾಡಿಕೊಳ್ಳುವ ಮೂಲಕ ಸಂಘರ್ಷವನ್ನು ನಿಯಂತ್ರಿಸಬೇಕಿದೆ ಎಂದರು.
ಶ್ರೀಮಂತ ಅರಣ್ಯ ಕ್ಷೇತ್ರವಿರುವ ಕರ್ನಾಟಕದಲ್ಲಿ ಅಂದಾಜು 6395ಕ್ಕೂ ಹೆಚ್ಚು ಆನೆಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ. ನಮ್ಮಲ್ಲಿ ಅಂದಾಜು 563 ಹುಲಿಗಳಿದ್ದು, ಹುಲಿಗಳ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ಅರ್ಜುನ ಆನೆ ಸ್ಮಾರಕವನ್ನು ಅದರ ಅಂತ್ಯಕ್ರಿಯೆ ನಡೆದ ಸಕಲೇಶಪುರದ ಬಳಿ ಮತ್ತು ವಾಸಸ್ಥಳ ಮೈಸೂರು ಜಿಲ್ಲೆ ಡಿ.ಬಿ.ಕುಪ್ಪೆಯಲ್ಲಿ ನಿ ರ್ಮಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಇಲಾಖೆ ಮುಂದಾಗಿರುವ ವಿಷಯ ತಿಳಿಸಿದ ಸಚಿವರು, ಅರ್ಜುನ ಆನೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಅರ್ಜುನ ಆನೆ ಮಾವುತರಾದ ವಿನು, ರಾಜು ಅವರನ್ನು ಸಚಿವರು ಗೌರವಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಮಾಜಿ ಸಚಿವ ಎಚ್.ಆಂಜನೇಯ, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಎಚ್.ಎನ್.ಮಂಜುನಾಥ್ ಗೊಪ್ಪೆ, ಬಿ.ಕಾಂತರಾಜ್, ಸದಸ್ಯ ಚಂದ್ರಶೇಖರ್, ಮುಖಂಡರಾದ ಮೆಹಬೂಬ್ ಪಾಷಾ, ಕೆ.ಸಿ.ನಾಗರಾಜ್, ಉದ್ಯಮಿ ಡಿ.ಎಸ್.ಸುರೇಶ್‌ಬಾಬು, ಗೋಪಾಲಸ್ವಾಮಿ ನಾಯಕ, ವಿನಯ್ ತಿಮ್ಮಾಪೂರ ಮತ್ತಿತರರು ಇದ್ದರು.

ಬೆಂಗಳೂರಿನ ಫ್ರೆಂಡ್ಸ್ ಕ್ರಿಕೆಟರ್ಸ್‌ಗೆ ಅರ್ಜುನ ಟ್ರೋಫಿ
ಅರ್ಜುನ್ ಕಪ್-2023ರ ಪಂದ್ಯಾವಳಿಯಲ್ಲಿ ಜಯ ಸಾಧಿಸಿದ ಬೆಂಗಳೂರಿನ ಫ್ರೆಂಡ್ಸ್ ಕ್ರಿಕೆಟರ್ಸ್‌ಗೆ ಅರ್ಜುನ ಟ್ರೋಫಿ ಮತ್ತು 2 ಲಕ್ಷ ರೂ., ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಜನಪ್ರಿಯ ಮೈಟಿ ಕ್ರಿಕೆಟರ್ಸ್‌ಗೆ ಬಲರಾಮ ಟ್ರೋಫಿ ಮತ್ತು 1 ಲಕ್ಷ ರೂ., ತೃತೀಯ ಸ್ಥಾನ ಪಡೆದ ಕುಂದಾಪುರದ ಜಾನ್ಸನ್ ಕ್ರಿಕೆಟರ್ಸ್‌ಗೆ ದ್ರೋಣ ಟ್ರೋಫಿ, 50 ಸಾವಿರ ರೂ. ಪ್ರದಾನ ಮಾಡಲಾಯಿತು.
ಫ್ರೆಂಡ್ಸ್ ಕ್ರಿಕೆಟರ್ಸ್‌ನ ಸಾಗರ ಭಂಡಾರಿ ಸರಣಿ ಶ್ರೇಷ್ಠ, ದಾವಣಗೆರೆ ಇಲೆವನ್ ತಂಡದ ರಿಯಾಜ್ ಉತ್ತಮ ಬ್ಯಾಟ್ಸ್‌ಮೆನ್ ಹಾಗೂ ಜನಪ್ರಿಯ ಮೈಟಿ ತಂಡದ ಸ್ಯಾಂಡಿ ಉತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net