

ಯರಗಟ್ಟಿ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಮುಂಬರುವ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ರಾಜ್ಯದಲ್ಲಿ ಮತ್ತೆ ಕಾಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಹೇಳಿದರು.
ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಅಂಗವಾಗಿ ಇನಾಮಹೊಂಗಲದಿಂದ ಯರಗಟ್ಟಿವರೆಗೆ ಹಮ್ಮಿಕೊಂಡಿದ್ದ 75 ಕಿ.ಮೀ ಪಾದಯಾತ್ರೆಯ ಸಮಾರೋಪದ ಸಮಾರಂಭ ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಜನತೆ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಅದಕ್ಕೆ ದಾವಣಗೆರೆಯಲ್ಲಿ ಮೊನ್ನೆ ಜರುಗಿದ ಸಿದ್ದರಾಮೋತ್ಸವ ಸಾಕ್ಷಿಯಾಗಿದೆ ಎಂದರು.
ಮಾಜಿ ಶಾಸಕ ಆರ್.ವಿ. ಪಾಟೀಲ ಮಾತನಾಡಿ, 1984ರಲ್ಲಿಯೇ ಯರಗಟ್ಟಿ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು ಆದರೆ, ಇಲ್ಲಿಯವರೆಗೂ ಅದು ಜಾರಿಗೆ ಬಂದಿಲ್ಲ. ನಮ್ಮ ಕ್ಷೇತ್ರದಲ್ಲಿ ನೀರಾವರಿ ಯೋಜನೆಯಲ್ಲಿ ಬಹಳಷ್ಟು ಹಿಂದೆ ಉಳಿದಿದೆ ಎಂದರು.
ಕಾಂಗ್ರೆಸ್ ಮುಖಂಡ ಮಲಿಕಸಾಬ್ ಬಾಗವಾನ ಮಾತನಾಡಿ, ಸತ್ತಿಗೇರಿ ಭಾಗದಲ್ಲಿ ಕಾಂಗ್ರೆಸ್‌ಗೆ ಆನೆ ಬಲವಾಗಿದ್ದ ಈರಣ್ಣ ಸಂಗಪ್ಪನವರ ಅವರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಸಂಘಟನೆ ಕುಂಠಿತವಾಗಿದ್ದು, ಅವರ ಸ್ಥಾನವನ್ನು ಪ್ರಕಾಶ ವಾಲಿ ಅವರು ತುಂಬಿದ್ದಾರೆ. ವಿಶ್ವಾಸ ವೈದ್ಯ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಚುನಾವಣೆ ಎದುರಿಸಬೇಕಿದೆ. ಅದಕ್ಕೆ ಎಲ್ಲ ಮುಖಂಡರು ಸಹಕರಿಸಬೇಕು ಎಂದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಪಾದಯಾತ್ರಿಗಳನ್ನು ವೇದಿಕೆಗೆ ಕರೆತರಲಾಯಿತು. ಜಿಪಂ ಸದಸ್ಯ ಫಕೀರಪ್ಪ ಹದ್ದನ್ನವರ, ನಿಖಿಲಕುಮಾರ ದೇಸಾಯಿ, ರವೀಂದ್ರ ಯಲಿಗಾರ, ಸದಾನಂದ ಕೌಜಲಗಿ, ಡಿ.ಡಿ. ಟೋಪೊಜಿ, ಎಚ್.ಎಸ್. ಗಂಗರಡ್ಡಿ, ಶಿವಾನಂದ ಕರಿಗನ್ನವರ, ಬಂಗಾರಪ್ಪ ಹರಳಿ, ಪ್ರಕಾಶ ವಾಲಿ, ಅಲ್ತಾಫ್ ಮುಲ್ಲಾ, ಮಂಜುನಾಥ ತಡಸಲೂರ, ಕಾಶೀಮಸಾಬ್ ಜಮಾದಾರ, ಸಿ.ಬಿ. ಬಾಳಿ, ಚಂದ್ರು ಜಂಬ್ರಿ, ನಿಖೀಲ ಪಾಟೀಲ ಇತರರಿದ್ದರು.