ರಾಜ್ಯದಲ್ಲಿ 5 ಕೋಟಿ ಸಸಿ ನೆಡಲು ನಿರ್ಧಾರ - ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿಕೆ

eshwar.jpg
Published on

ದಾವಣಗೆರೆ: ರಾಜ್ಯದಲ್ಲಿ ಹಸಿರೀಕರಣ ಮಾಡುವ ಸಂಬಂಧ ಪ್ರಸಕ್ತ ವರ್ಷ 5 ಕೋಟಿ ಸಸಿಗಳನ್ನು ನೆಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ದಾವಣಗೆರೆಯ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಶುಕ್ರವಾರ, ಬಳ್ಳಾರಿ ವೃತ್ತ ವ್ಯಾಪ್ತಿಯ ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಪರಿಸರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಶೇ.21 ರಷ್ಟಿರುವ ಅರಣ್ಯ ಪ್ರದೇಶವನ್ನು ಮಾನದಂಡದನ್ವಯ ಶೇ 33ರಷ್ಟಕ್ಕೆ ವಿಸ್ತರಿಸುವ ಗುರಿ ಇದೆ. ಇದಕ್ಕಾಗಿ ಐದು ವರ್ಷದಲ್ಲಿ ಹಂತ ಹಂತವಾಗಿ ಸಸಿ ನೆಡುವ ತೀರ್ಮಾನವಿದೆ. ಪ್ರಸಕ್ತ ವರ್ಷದಲ್ಲಿ ಮಳೆಗಾಲ ಆರಂಭವಾದ ತಕ್ಷಣ ಸಸಿ ನೆಡಲು ಮತ್ತು ರೈತರಿಗೂ ಗಿಡಗಳನ್ನು ವಿತರಿಸಲು ಸಿದ್ಧ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆಯಾದ್ರೆ ಅಧಿಕಾರಿಗಳೇ ಹೊಣೆ

ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹಾಸನದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಒತ್ತುವರಿ ತೆರವಿಗೆ ಕ್ರಮವಹಿಸದಿದ್ದರೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಸಚಿವರು ಹೇಳಿದರು.

ಅಲ್ಲಿ 40-50 ವರ್ಷದಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರು, ಪಾರಂಪರಿಕ ಸಾಗುವಳಿ ಮಾಡುತ್ತ ಬಂದಿದ್ದರೆ ಅವರನ್ನು ಒಕ್ಕಲೆಬ್ಬಿಸಬೇಕಿಲ್ಲ. ಅವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದರು.

ಗಣಿಗಾರಿಕೆ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ಅನುಮತಿ ಪಡೆದು ಭೂಮಿ ಒತ್ತುವರಿ ಮಾಡಿದ್ದಲ್ಲಿ ತೆರವಿಗೆ ಕ್ರಮ ವಹಿಸಬೇಕು.

ಒತ್ತುವರಿಯಾಗಿದ್ದಲ್ಲಿ ಜಿಪಿಎಸ್ ಮತ್ತು ಸ್ಯಾಟಲೈಟ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ. ದಾವಣಗೆರೆ ಭಾಗದಲ್ಲಿ ಅಧಿಕಾರಿಗಳು ವಿಂಡ್ ಮಿಲ್ ಮಾಲೀಕರ ಪರವಾಗಿ ವರ್ತಿಸಿದಲ್ಲಿ ಕ್ರಿಮಿನಲ್ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು.

ವನ್ಯಜೀವಿಗಳ ರಕ್ಷಣೆಗೆ ಸಿದ್ಧ

ವನ್ಯಜೀವಿ ಸಂರಕ್ಷಣೆ ಇಲಾಖೆಯ ಹೊಣೆಯಾಗಿದೆ. ಕಾಡುಪ್ರಾಣಿಗಳಿಂದ ಜನರಿಗಾಗುವ ಸಂಘರ್ಷಗಳನ್ನು ತಪ್ಪಿಸಲು ಅಗತ್ಯವಿರುವ ಕಡೆ ರೇಲ್ ಬ್ಯಾರಿಕೇಡ್ ಅಥವಾ ಸೋಲಾರ್ ತಂತಿಬೇಲಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಕಳೆದ ವರ್ಷ ಆನೆ ತುಳಿತದಿಂದ 52 ಜನರು ಮೃತಪಟ್ಟಿದ್ದರು. ಇತ್ತೀಚೆಗೆ ಚಾಮರಾಜನಗರ ಇತರೆಡೆ ಆನೆ ತುಳಿತದಿಂದ ಪ್ರಾಣ ಕಳೆದುಕೊಂಡ ಮೂವರು ಮೃತರ ಕುಟುಂಬಕ್ಕೆ 15 ಲಕ್ಷ ರೂ.ಗಳ ಪರಿಹಾರದ ಚೆಕ್ ನೀಡಲಾಗಿದೆ ಎಂದರು.

ಪರಿಸರ ಇಲಾಖೆ ಜಡ್ಡುಗಟ್ಟಿ ಹೋಗಿದೆ.ಕಾರ್ಖಾನೆಗಳು ವಾತಾವರಣದಲ್ಲಿ ಹೊಗೆ, ಧೂಳು ಬಿಡುತ್ತಿವೆ. ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ಕೆರೆಗಳಿಗೆ ಬಿಡಲಾಗುತ್ತಿದೆ. ಇದೆಲ್ಲದರ ಪರಿಣಾಮ ಪರಿಸರ ಮಾಲಿನ್ಯವಾಗುತ್ತಿದೆ. ಅಧಿಕಾರಿಗಳು ನಿಯಮಿತವಾಗಿ ಕಾರ್ಖಾನೆಗಳು ಹೊರಸೂಸುವ ಹೊಗೆ, ಗಾಳಿ ಪರೀಕ್ಷೆ ಮಾಡಬೇಕು. ದೆಹಲಿಯಲ್ಲಿ ಪರಿಸರ ಹದಗೆಟ್ಟಿರುವುದು ಎಲ್ಲರಿಗೂ ತಿಳಿದಿದೆ.

ಪರಿಸರ ಮತ್ತು ಗಣಿಗಾರಿಕೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗಮನಹರಿಸುತ್ತಿದೆ. ನಮಗೆ ಪರಿಸರವೂ ಬೇಕು. ಕೈಗಾರಿಕೆಗಳೂ ಬೇಕು. ಈ ಸಮನ್ವಯ ಸಾಧಿಸಲು ಸಿಎಂ, ಪರಿಸರವಾದಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಸರ್ಕಾರವು ಜೂ. 30ರೊಳಗಾಗಿ ಸಾಮಾನ್ಯ ವರ್ಗಾವಣೆ ಮಾಡಲಿದೆ. ಅಷ್ಟರೊಳಗಾಗಿ ವರ್ಗಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಎಲ್ಲೆಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎನ್ನುವುದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಅರಣ್ಯ ಇಲಾಖೆ ಬಳ್ಳಾರಿ ವೃತ್ತದ ನೋಡಲ್ ಅಧಿಕಾರಿ ಪ್ರಭಾಷ್ ಚಂದ್ರ ರೇ, ಶಾಸಕ ಕೆ.ಎಸ್.ಬಸವಂತಪ್ಪ, ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಐದು ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿಗಳು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net