ರಾಜ್ಯದಲ್ಲಿ 1 ಲಕ್ಷ ಫ್ಲ್ಯಾಟ್​​ ನಿರ್ಮಾಣ

KHB 21 June 20
Published on

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಒಟ್ಟು 1 ಲಕ್ಷ  ಫ್ಲ್ಯಾಟ್​​ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಕರ್ನಾಟಕ ಗೃಹ ಮಂಡಳಿಯಿಂದ ಇನ್ನು ಮುಂದೆ ಸೈಟ್ ಹಂಚಿಕೆ ಬದಲು ಫ್ಲ್ಯಾಟ್​​​ಗಳನ್ನೇ ಹೆಚ್ಚಾಗಿ ನಿರ್ವಿುಸಿ ವಿತರಿಸಲು ಚಿಂತಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕರ್ನಾಟಕ ಗೃಹ ಮಂಡಳಿ (ಕೆಎಚ್​ಬಿ) ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೆಲಮಹಡಿ ಮತ್ತು ಮೂರು ಅಂತಸ್ತಿನ ಅಪಾರ್ಟ್​ವೆುಂಟ್​ಗಳು, ಬೆಂಗಳೂರಿನಲ್ಲಿ ಬಹುಮಹಡಿ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಮತ್ತು ಗೃಹ ಮಂಡಳಿ ನಿವೇಶನಗಳಿಗೆ ಸಂಬಂದಿಸಿದಂತೆ ಫಲಾನುಭವಿಗಳಿಗೆ ಭೂಮಿ ಹಕ್ಕು ಕೊಡಲು ನಿರ್ಧರಿಸಲಾಗಿದೆ. 15 ವರ್ಷಗಳವರೆಗೆ ಅದನ್ನು ಮಾರಾಟ ಮಾಡುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ರಾಜ್ಯದಲ್ಲಿ ಗೃಹ ಮಂಡಳಿ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸೇರಿದ 28 ಸಾವಿರ ನಿವೇಶನಗಳಿವೆ. ಅಲ್ಲಿ ರಸ್ತೆ, ಒಳಚರಂಡಿ ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮನೆ ನಿರ್ಮಾಣ ಮತ್ತು ಕೊಳ್ಳುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಜಿಪಿಎಸ್: ಗೃಹ ಮಂಡಳಿಯ ಎಲ್ಲ ಇಂಜಿನಿಯರ್​ಗಳಿಗೆ ಮಾಸಿಕ ದಿನಚರಿ ಕಡ್ಡಾಯ ಮಾಡಲಾಗಿದೆ. ಅವರ ಚಲನವಲನಗಳ ಬಗ್ಗೆ ನಿಗಾ ಇಡಲು ಅವರ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.

ಕ್ರಿಮಿನಲ್ ಪ್ರಕರಣಕ್ಕೆ ಸೂಚನೆ: ವಿಜಯಪುರ ಜಿಲ್ಲೆಯಲ್ಲಿ 400 ನಿವೇಶನಗಳನ್ನು ಪೂರ್ಣ ಹಣ ಪಾವತಿ ಮಾಡಿಸಿಕೊಳ್ಳದೆ ನೋಂದಣಿ ಮಾಡಿಕೊಟ್ಟಿರುವ ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶಿಸಿ, ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಸೋಮಣ್ಣ ಹೇಳಿದರು. ಇದನ್ನೂ ಓದಿ: VIDEO: ಚಿತ್ರ ಬಿಡಿಸಿದ ಕನ್ನಡಿಗನ ಕಲೆಗೆ ಡೇವಿಸ್ ವಾರ್ನರ್ ಮೆಚ್ಚುಗೆ..!

ನನ್ನ ಕ್ಷೇತ್ರದಲ್ಲಿ 28 ಕೇಸ್ ಇದ್ದು, ಈ ತನಕ 3 ಜನ ಸತ್ತಿದ್ದಾರೆ. ನನಗೆ 69 ವರ್ಷ. ನನ್ನ ಹೆಂಡತಿ ಮೊದಲು ಕೋವಿಡ್ ಚೆಕ್ ಮಾಡಿಸಿಕೊಂಡು ಮನೆಗೆ ಬನ್ನಿ ಎನ್ನುತ್ತಾರೆ. ಹಾಗಾಗಿ ಆಗಾಗ್ಗೆ ಚೆಕ್ ಮಾಡಿಕೊಳ್ಳುತ್ತೇನೆ. ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಪರೀಕ್ಷೆ ಮಾಡಿಸಲಾಗುವುದು. | ವಿ.ಸೋಮಣ್ಣ ವಸತಿ ಸಚಿವ

ಜಿಗಣಿ ಬಳಿ 30 ಸಾವಿರ ನಿವೇಶನಗಳ ಟೌನ್​ಶಿಪ್

ಜಿಗಣಿ ಬಳಿ 1,938 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ 30 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಪ್ರಧಾನ ಮಂತ್ರಿಗಳ ಟೌನ್​ಶಿಪ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈಗ 600 ಎಕರೆ ಲಭ್ಯವಾಗಿದ್ದು, ಇನ್ನಷ್ಟು ಭೂಮಿ ಪಡೆಯಲಾಗುವುದು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.

ಕುಂಠಿತಗೊಂಡ ಯೋಜನೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 28 ಸಾವಿರ ಕೋಟಿ ರೂ. ಅಂದಾಜಿನ ವಸತಿ ಯೋಜನೆ ರೂಪಿಸಿದರೂ ಅದಕ್ಕೆ ಬಿಡುಗಡೆ ಮಾಡಿದ್ದು 2 ಸಾವಿರ ಕೋಟಿ ಮಾತ್ರ. ಕುಮಾರಸ್ವಾಮಿ ಸರ್ಕಾರದಲ್ಲಿ ಏನೂ ಮಾಡಲಿಲ್ಲ. ಹಾಗಾಗಿ ಯೋಜನೆ ಕುಂಠಿತಗೊಳ್ಳುತ್ತಾ ಬಂತು. ಆ ಕಾರಣಕ್ಕಾಗಿಯೇ ಈಗ ಬಾಕಿ ಇರುವ ಕೆಲಸಗಳನ್ನುಆದ್ಯತೆ ಮೇಲೆ ಮಾಡಲಾಗುತ್ತಿದೆ ಎಂದರು.

5.4 ಲಕ್ಷ ಜನರಿಗೆ ವಸತಿ

ರಾಜ್ಯದಲ್ಲಿ 9 ಲಕ್ಷ ಮಂದಿ ವಸತಿ ರಹಿತರು ಎಂದು ಸರ್ವೆ ಮಾಡಲಾಗಿತ್ತು. ಈ ಸಮೀಕ್ಷಾ ವರದಿ ಪರಿಶೀಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಬಳಿಕ ಪಟ್ಟಿಯಲ್ಲಿದ್ದವರ ಸಂಖ್ಯೆ 5.4 ಲಕ್ಷಕ್ಕೆ ಇಳಿದಿದೆ. ಅಷ್ಟೂ ಬಡವರಿಗೆ ಮನೆ, ನಿವೇಶನ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಸೋಮಣ್ಣ ಹೇಳಿದರು.

ನಿವೇಶನ ನಿರ್ಮಾಣ ಗುರಿ

ಹರಪನಹಳ್ಳಿ, ಸೂರ್ಯನಗರ ರಾಜಾಪುರ, ಉಡುಪಿ ಜಿಲ್ಲೆ ಕೊರಂಗ್ರಪಾಡಿ, ಬೆಂಗಳೂರು ದಕ್ಷಿಣ ತಾಲೂಕು ದೊಣ್ಣೇನಹಳ್ಳಿ, ನೆಲಮಂಗಲ ತಾಲೂಕು ಮಾಚೋನಾಯನಹಳ್ಳಿಯಲ್ಲಿ ಒಟ್ಟು 6 ಯೋಜನೆಗಳಲ್ಲಿ 400 ಎಕರೆ ಪ್ರದೇಶದಲ್ಲಿ 6 ಸಾವಿರ ನಿವೇಶನ ನಿರ್ಮಾಣ ಮಾಡಲಾಗುವುದು. ಕನಕಪುರ ತಾಲೂಕು ರಾಯಸಂದ್ರ, ನೆಲಮಂಗಲ ತಾಲೂಕು ಮಾಚೋನಾಯಕನಹಳ್ಳಿ, ಮೂಡಿಗೆರೆ, ಮೈಸೂರಿನ ಇಲವಾಲ, ಮುಂಡರಗಿಯಲ್ಲಿ 4 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಲು ಟೆಂಡರ್ ಮಾಡಲಾಗಿದೆ. ರಾಜ್ಯದ 22 ಸ್ಥಳಗಳಲ್ಲಿ 24 ಸಾವಿರ ನಿವೇಶನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು. ಸ್ವಯತ್ತ ಸಂಸ್ಥೆಯಾಗಿರುವ ಗೃಹ ಮಂಡಳಿಯಲ್ಲಿ 2,635 ಕೋಟಿ ಮೊತ್ತದ 30,465 ಸ್ವತ್ತುಗಳನ್ನು ಗಣಕೀಕರಣಗೊಳಿಸಿ ಕಾಲ ಕಾಲಕ್ಕೆ ವಿಲೇವಾರಿ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net