ರಾಜ್ಯದಲ್ಲಿ 1.5 ಲಕ್ಷ ಬಾಲಗರ್ಭಿಣಿ ಪ್ರಕರಣ

Aayoga
Published on

ಚಿತ್ರದುರ್ಗ: ರಾಜ್ಯದಲ್ಲಿ 1.5 ಲಕ್ಷ ಬಾಲಗರ್ಭಿಣಿ ಪ್ರಕರಣಗಳಿರುವ ಕುರಿತು ಮಾಹಿತಿ ಇದೆ. ಇದು ಆತಂಕದ ಸಂಗತಿಯಾಗಿದ್ದು, ಕ್ರಮ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಪ್ರಸಕ್ತ ಏಪ್ರಿಲ್‌ನಿಂದ ಜುಲೈ 29ರವರೆಗೆ ಒಟ್ಟು 164 ಬಾಲ ಗರ್ಭಿಣಿಯರು ಪತ್ತೆಯಾಗಿದ್ದು, ಆರ್‌ಸಿಎಚ್ ತಂತ್ರಾಂಶದ ಪ್ರಕಾರ 300ಕ್ಕೂ ಹೆಚ್ಚು ಪ್ರಕರಣಗಳಿವೆ. ಕೂಡಲೇ ಎಫ್‌ಐಆರ್ ದಾಖಲಿಸಲು ಕ್ರಮವಹಿಸಿ ಎಂದು ಸೂಚಿಸಿದರು.

ರಾಜ್ಯ ಸರ್ಕಾರ ಬಾಲಗರ್ಭಿಣಿ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ. ಸಿಎಂ ಕೂಡ ಸೂಕ್ತ ಕ್ರಮಕ್ಕೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ. ಅಧಿಕಾರಿಗಳು ಇದರ ಗಂಭೀರತೆ ಅರಿತು ಕಾರ್ಯಪ್ರವೃತ್ತರಾಗಬೇಕು. ವೈದ್ಯಾಧಿಕಾರಿಗಳಲ್ಲಿ ಶಂಕೆ ಉಂಟಾದ ಕೂಡಲೇ ಪರಿಶೀಲಿಸಿ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಶಾಲೆಯಿಂದ ಹೊರಗುಳಿದ ಮಕ್ಕಳೇ ಇಂತಹ ಸಾಮಾಜಿಕ ಪಿಡುಗುಗಳಿಗೆ ಬಲಿ ಪಶುಗಳಾಗುತ್ತಾರೆ. ಆದ್ದರಿಂದ ಸಮೀಕ್ಷೆ ಪರಿಣಾಮಕಾರಿಯಾಗಿ ನಡೆಸಿ ಬಾಲ್ಯವಿವಾಹ, ಬಾಲ ಕಾರ್ಮಿಕ ಹಾಗೂ ಬಾಲ ಗರ್ಭಿಣಿ ಪ್ರಕರಣ ತಗ್ಗಿಸಲು ಮುಂದಾಗಿ ಎಂದರು.

ತಾಲೂಕಿನ ಎಲ್ಲ ಶಾಲೆ, ವಸತಿನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನವಾಗಬೇಕು. ಇದರ ಜೊತೆಗೆ ಜಿಲ್ಲೆಯ ಯಾವುದೇ ಪದವಿ ಪೂರ್ವ ಕಾಲೇಜುಗಳಲ್ಲಿ ನೀತಿ ಪಾಲಿಸುತ್ತಿಲ್ಲ. ಈ ಕುರಿತು ಗಮನಹರಿಸಿ. ನಗರಸಭೆ ಕ್ರೀಡಾ ಅನುದಾನದಲ್ಲಿ ಅಂಗನವಾಡಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಬೇಕು. ಆರ್‌ಬಿಎಸ್‌ಕೆ ಅಡಿ ಗಂಭೀರ ಕಾಯಿಲೆಯುಳ್ಳ ಮಕ್ಕಳ ಚಿಕಿತ್ಸೆಗೆ ಮುಂದಾಗಬೇಕು ಎಂದು ಸೂಚಿಸಿದರು.

ಮಕ್ಕಳ ಸ್ನೇಹಿಯಾಗಿಸಿ: ಪ್ರತಿ ಗ್ರಾಪಂಗಳಲ್ಲಿ ಮಹಿಳಾ ಮಕ್ಕಳ ಕಾವಲು ಸಮಿತಿ ಜೊತೆಗೆ ಮಕ್ಕಳ ಶಿಕ್ಷಣ ಕಾರ್ಯಪಡೆ ರಚಿಸಬೇಕು. ಮಕ್ಕಳ ಸ್ನೇಹಿಯನ್ನಾಗಿಸಿ ಅಂಕಿ-ಅಂಶಗಳ ಸಮೇತ ನಿಖರ ದಾಖಲೆ ಹೊಂದಿರಿ. ಅಶಕ್ತ, ನಿರ್ಗತಿಕ ಪಾಲಕರ ಮಕ್ಕಳು, ಅನಾಥರು, ಪಾಲಕರಿಲ್ಲದೆ ಸಂಬಂಧಿಕರ ಬಳಿ ಇರುವಂತವರ ಮಾಹಿತಿ ಸಂಗ್ರಹಿಸಬೇಕು. ಏಕೆಂದರೆ ಇಂತಹ ಮಕ್ಕಳ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ ಎಂದು ತಿಪ್ಪೇಸ್ವಾಮಿ ಹೇಳಿದರು.

ತಹಸೀಲ್ದಾರ್ ಡಾ.ನಾಗವೇಣಿ, ತಾಪಂ ಇಒ ಹನುಮಂತಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net