ರಾಜ್ಯದಲ್ಲಿ 1.10 ಕೋಟಿ ಫಲಾನುಭವಿಗಳ ನೋಂದಣಿ

2
Published on

ನಂಜನಗೂಡು: ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ 1 ಕೋಟಿ 28 ಲಕ್ಷ ಕುಟುಂಬಗಳು ಗೃಹಲಕ್ಷ್ಮೀ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದು, ಈಗಾಗಲೇ 1 ಕೋಟಿ 10 ಲಕ್ಷ ಕುಟುಂಬಗಳ ನೋಂದಣಿ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.


ಸೋಮವಾರ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗುವುದು. ಈ ಯೋಜನೆ ವ್ಯಾಪ್ತಿಗೆ ರಾಜ್ಯದ ಪ್ರತಿಯೊಬ್ಬ ಅರ್ಹರು ಬರಲಿ ಎಂಬ ಉದ್ದೇಶದಿಂದ ಜಾಹೀರಾತು ನೀಡಿ ಪ್ರಚಾರ ಮಾಡಲಾಗಿದೆ. ರಾಜ್ಯದಲ್ಲಿ 1 ಕೋಟಿ 53 ಲಕ್ಷ ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿದ್ದು, ಆ ಪೈಕಿ 1 ಕೋಟಿ 28 ಲಕ್ಷ ಕುಟುಂಬಗಳು ಮಾತ್ರ ಗೃಹಲಕ್ಷ್ಮೀ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸುಮಾರು 1.10 ಕೋಟಿ ಕುಟುಂಬಗಳ ನೋಂದಣಿ ಕಾರ್ಯ ಮುಕ್ತಾಯಗೊಂಡಿದೆ. ಬಾಕಿ 18 ಲಕ್ಷ ನೋಂದಣಿ ಮುಕ್ತಾಯಗೊಂಡಲ್ಲಿ ಗೃಹಲಕ್ಷ್ಮೀ ಯೋಜನೆ ಲಾಭ ಜನರಿಗೆ ತಲುಪಲಿದೆ. ಅಲ್ಲಿಯವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ತಿಳಿಸಿದರು.


ನೋಂದಣಿ ಮುಕ್ತಾಯಗೊಂಡ ಬಳಿಕ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಪಿಂಕ್ ಕಾರ್ಡ್ ದೊರಕಲಿದೆ. ಈ ಪಿಂಕ್ ಕಾರ್ಡ್‌ಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಪಡಿತರ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಗೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ಬಸವಣ್ಣ ಮತ್ತು ಅಂಬೇಡ್ಕರ್ ಅವರ ತತ್ವ-ಆದರ್ಶಗಳನ್ನು ಪಾಲಿಸುತ್ತಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ತಾಲೂಕಿನ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದ ಸಿಡಿಪಿಒ ಕವಿತಾ, ತಾಲೂಕಿನಲ್ಲಿ 1,07,146 ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. 95 ಸಾವಿರ ಫಲಾನುಭವಿಗಳ ನೋಂದಣಿ ಆಗಿದೆ. 12 ಸಾವಿರ ನೋಂದಣಿ ಕಾರ್ಯ ಬಾಕಿ ಇದೆ ಎಂದು ತಿಳಿಸಿದರು.
ನಂಜನಗೂಡು ವಿಧಾನಸಭಾ ವ್ಯಾಪ್ತಿಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಮೊಬೈಲ್ ನಂಬರ್ ಸಹಿತ ಶಾಸಕರಿಗೆ ನೀಡಬೇಕು. ಜತೆಗೆ ಪಿಂಕ್‌ಕಾರ್ಡ್‌ಗಳನ್ನು ಶಾಸಕರ ಮೂಲಕ ವಿತರಿಸಲು ಮುಂದಾಗಬೇಕು ಎಂದು ಸಚಿವೆ ಸಿಡಿಪಿಒ ಕವಿತಾ ಅವರಿಗೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಹೂಗುಚ್ಛ ನೀಡಿ ಅಭಿನಂದಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ನಗರಸಭಾ ಸದಸ್ಯರಾದ ಶ್ರೀಕಂಠಸ್ವಾಮಿ, ಪ್ರದೀಪ್, ಗಂಗಾಧರ್, ಎಸ್.ಪಿ.ಮಹೇಶ್, ಮುಖಂಡರಾದ ಗೋವಿಂದರಾಜು, ಹಂಡುವಿನಹಳ್ಳಿ ಪರಶಿವಮೂರ್ತಿ, ಸತೀಶ್‌ಗೌಡ, ಸೋಮು, ಮಂಜುಳಾ ಇತರರಿದ್ದರು.

ಪೋಟೋ 1
ನಂಜನಗೂಡಿನ ಶ್ರೀ ಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೇವರ ದರ್ಶನ ಪಡೆದರು.

ಪೋಟೋ 2
ನಂಜನಗೂಡಿನ ಶ್ರೀ ಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೂಗುಚ್ಛ ನೀಡಿ ಶಾಸಕ ದರ್ಶನ್ ಧ್ರುವನಾರಾಯಣ್ ಅಭಿನಂದಿಸಿದರು. ಶ್ರೀಕಂಠಸ್ವಾಮಿ, ಪ್ರದೀಪ್, ಗಂಗಾಧರ್, ಎಸ್.ಪಿ.ಮಹೇಶ್, ಗೋವಿಂದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net