

ವಿಜಯಪುರ: ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆ ರಾಜ್ಯದ ಮೂರು ಕಡೆ ಹೂಡಿಕೆದಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ಕರೊನಾ ಹಿನ್ನೆಲೆ ಸಮಾವೇಶ ಹಮ್ಮಿಕೊಳ್ಳಲು ತಡವಾಗಿದ್ದು ಶೀಘ್ರದಲ್ಲಿಯೆ ವಿಜಯಪುರ- ಬಾಗಲಕೋಟೆ, ಕಲಬುರಗಿ- ಬೀದರ ಹಾಗೂ ಮೈಸೂರು ಭಾಗ ಕೇಂದ್ರೀಕರಿಸಿಕೊಂಡು ಸಮಾವೇಶ ಹಮ್ಮಿಕೊಳ್ಳುವುದಾಗಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಕೈಗಾರಿಕೆ ಸಚಿವನಾದ ಮೇಲೆ ಪ್ರತೀ ಜಿಲ್ಲೆಗೆ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ. ಕೈಗಾರಿಕೆ ಪ್ರದೇಶ ಅಭಿವೃದ್ಧಿ, ಹೂಡಿಕೆದಾರರ ಸೆಳೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಕೈಗಾರಿಕೆಗಳು ಬೆಂಗಳೂರು ಕೇಂದ್ರೀಕೃತವಾಗಿದ್ದರಿಂದ 2 ಮತ್ತು 3 ನೇ ಹಂತದ ನಗರಗಳಿಗೂ ಕೈಗಾರಿಕೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿಜಯಪುರ ಮುಳವಾಡ ಹತ್ತಿರದ 3000 ಎಕರೆ ಪ್ರದೇಶವನ್ನು ಕೈಗಾರಿಕೆ ವಲಯಕ್ಕೆ ಅಭಿವೃದ್ಧಿ ಪಡಿಸಲಾಗಿದ್ದು ಕೆಲವೇ ತಿಂಗಳಲ್ಲಿ ಮೊದಲ ಹಂತದ ಪ್ರದೇಶವನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಸಾಕಷ್ಟು ಉದ್ಯಮಿಗಳು ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಿದ್ದಾರೆ ಎಂದರು.
ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಲು ನೂತನ ಕೈಗಾರಿಕೆ ನೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಕೈಗಾರಿಕೆಗಳು ನಿಯಮ ಪಾಲಿಸುತ್ತಿವೆ. ಹಾಗೊಂದು ವೇಳೆ ಸ್ಥಳೀಯರಿಗೆ ಆದ್ಯತೆ ಕಲ್ಪಿಸದೇ ಹೋದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಇದ್ದರು.