ರಾಜ್ಯದ ಲೂಟಿಗಿಳಿದ ಬಿಜೆಪಿ

30 SIRA SIDDU
Published on

ಶಿರಾ/ಚಿಕ್ಕನಾಯಕನಹಳ್ಳಿ/ತಿಪಟೂರು: ಮಾಜಿ ಸಿಎಂ ಸಿದ್ದರಾಮಯ್ಯ ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳ ಪರ ಭಾನುವಾರ ಅಬ್ಬರದ ಪ್ರಚಾರ ನಡೆಸಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಕಿರಣ್ ಕುಮಾರ್ ಗೆದ್ದರೆ ಕಾಂಗ್ರೆಸ್ ಪರ ಕೈ ಎತ್ತುತ್ತಾರೆ, ನನಗೆ ಶಕ್ತಿ ಬರುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಗಾದಿ ಆಸೆ ಬಹಿರಂಗಪಡಿಸಿದರು.
ಮಾಧುಸ್ವಾಮಿ ಗೆದ್ರೆ ಬಿಜೆಪಿ ಪರ ಕೈ ಎತ್ತುತ್ತಾರೆ. ಇನ್ನು ಬಾಬು ಗೆದ್ರೆ ಕುಮಾರಸ್ವಾಮಿ ಪರ ಕೈ ಎತ್ತುತ್ತಾರೆ. ಹೀಗಾಗಿ ಚಿಕ್ಕನಾಯಕನಹಳ್ಳಿ ಜನಕ್ಕೆ ನಾನು ಬೇಕಾ? ಬಿಜೆಪಿ ಬೇಕಾ? ಜೆಡಿಎಸ್ ಬೇಕಾ? ಅನ್ನೋದನ್ನ ತೀರ್ಮಾನ ಮಾಡ್ಬೇಕಾಗುತ್ತೆ. ನಿಮಗೆ ನಾನು ಬೇಕು ಅಂತಾದ್ರೆ ಕಿರಣ್‌ಗೆ ಮತನೀಡಿ ಗೆಲ್ಲಿಸಿ ಕಳುಹಿಸಿ ಎಂದರು.
ಬಿಜೆಪಿ ಅಲ್ಪಸಂಖ್ಯಾತ ಸಮುದಾಯಕ್ಕೆ ಒಂದೂ ಟಿಕೆಟ್ ನೀಡಿಲ್ಲ, ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳನ್ನು ಹೊರಗಿಟ್ಟರೆ ಸಬ್ ಕಾ ಸಾಥ್ ಹೇಗಾಗುತ್ತೆ? ಸಿಲಿಂಡರ್, ಪೆಟ್ರೊಲ್, ಅಡುಗೆ ಎಣ್ಣೆ, ಗೊಬ್ಬರ ಹೀಗೆ ಪ್ರತಿಯೊಂದು ಪದಾರ್ಥದ ಬೆಲೆಯೂ ಹೆಚ್ಚಾಗಿದೆ. ಇದನ್ನು ಅಚ್ಚೇದಿನ್ ಎಂದು ಹೇಳಬೇಕಾ? ಎಂದರು.
ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆಯುತ್ತಾರೆ. ಆದರೂ ಪ್ರಧಾನಿ ಏನು ಕ್ರಮ ಕೈಗೊಳ್ಳುವುದಿಲ್ಲ. ನಾವು ತಿನ್ನುವುದಿಲ್ಲ ತಿನ್ನುವವರಿಗೂ ಬಿಡುವುದಿಲ್ಲ ಎಂದು ಅಧಿಕಾರಕ್ಕೆ ಬಂದ ಮೋದಿಜೀ ಇದು ಸರಿನಾ? ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಜನರ ಆಶೀರ್ವಾದದಿಂದ ಅಲ್ಲ. ಎಂಎಲ್ಎಗಳನ್ನು ಕೊಂಡುಕೊಂಡು, ನೂರಾರು ಕೋಟಿ ಹಣ ಖರ್ಚು ಮಾಡಿ ಹಿಂಭಾಗಲಿನಿಂದ ಅಧಿಕಾರ ಹಿಡಿದರು. ನಂತರ ಖರ್ಚು ಮಾಡಿದ್ದನ್ನು ಗಳಿಸಬೇಕಲ್ವಾ? ಅದಕ್ಕೆ ರಾಜ್ಯದ ಲೂಟಿಗಿಳಿದರು ಎಂದರು.
ಶಿರಾ ಕ್ಷೇತ್ರ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಜಯಚಂದ್ರ ನೇರ ಕಾರಣ. ಹೇಮಾವತಿ ನೀರು, ಬ್ಯಾರೇಜ್ಗಳ ನಿರ್ಮಾಣ , ಅಪ್ಪರ್ ಭದ್ರ ಎತ್ತಿನಹೊಳೆ ಎಲ್ಲಕ್ಕೂ ಜಯಚಂದ್ರ ಕಾರಣ. ಹತ್ತು ವರ್ಷ ಮಾಡಿದ ಕೆಲಸವನ್ನು ಜಯಚಂದ್ರ ನಿಮ್ಮ ಮುಂದೆ ಇಟ್ಟಿದ್ದಾರೆ ಎಂದರು. ಎಪಿಸಿಸಿ ಮಾಜಿ ಅಧ್ಯಕ್ಷ ರಘುವೀರ ರೆಡ್ಡಿ, ಅಭ್ಯರ್ಥಿ ಟಿ.ಬಿ.ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಎಂಎಲ್ಸಿ ನಾಗರಾಜ ಯಾದವ್, ಮಾಜಿ ಶಾಸಕ ಸಾ.ಲಿಂಗಯ್ಯ ಇದ್ದರು.
ಬಿಜೆಪಿ ಸೇರಿ ಇಂಗು ತಿಂದ ಮಂಗನಾದ ಎಸ್‌ಪಿಎಂ: 2014ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಪ್ರಚಾರ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ.ಮುದ್ದಹನುಮೇಗೌಡಗೆ ಅಧಿಕ ಮತ ಕೊಡಿಸಿ ಗೆಲ್ಲಿಸಿದ್ದೆ. ಆದರೆ, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಈಗ ಇಂಗು ತಿಂದ ಮಂಗನಂತಾಗಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕುಣಿಗಲ್‌ನಲ್ಲಿ ಟಿಕೆಟ್ ಸಿಗುತ್ತೆ ಎಂದು ಬಿಜೆಪಿಗೆ ಹೋದರು. ಬಿಜೆಪಿಯವರು ತಿರುಪತಿ ನಾಮ ಹಾಕಿದ್ದಾರೆ. ನಾನು ಎಂಪಿಗೆ ನಿಲ್ಲಿ ಅಥವಾ ತುಮಕೂರು ಗ್ರಾಮಾಂತರದಲ್ಲಿ ನಿಲ್ಲಿ ಎಂದು ಸಲಹೆ ನೀಡಿದ್ದೆ ಎಂದರು.
ಅತಂತ್ರ ಫಲಿತಾಂಶಕ್ಕೆ ಜೆಡಿಎಸ್ ಪೂಜೆ: ಜೆಡಿಎಸ್‌ನವರು ಗೆದ್ದೇತ್ತಿನ ಬಾಲ ಹಿಡಿಯೋರು. ಅತಂತ್ರ ಫಲಿತಾಂಶ ಬರಲಿ ಅಂತಾ ದಿನವೂ ಹೋಮ, ಹವನ ಪೂಜೆ ಮಾಡ್ತಾರೆ. ನಾನು ಹೇಳ್ತಿನಿ ಕಾಂಗ್ರೆಸ್ 135ಕ್ಕೂ ಹೆಚ್ಚು ಸೀಟ್ ಗೆಲ್ಲಲಿದೆ. ಯಾವುದೇ ಕಾರಣಕ್ಕೂ ಅವರನ್ನ ಅವಲಂಬಿಸೋ ಪ್ರಮೇಯ ಬರುವುದಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಬಂದು ಅನುದಾನ ಕೇಳದ ಶಾಸಕ: ಚಿಕ್ಕನಾಯಕನಹಳ್ಳಿ: ನಾನು ಸಿಎಂ ಆಗಿದ್ದಾಗ ಚಿಕ್ಕನಾಯಕನಹಳ್ಳಿ ಶಾಸಕರಾಗಿದ್ದ ಸುರೇಶ್‌ಬಾಬು ಎಂದೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೋರಿ ಬರಲೇ ಇಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು. ನಾನು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಅನುದಾನ ನೀಡಲು ಸಿದ್ಧನಿದ್ದೆ. ಆದರೆ, ಇಲ್ಲಿನ ಶಾಸಕ ಬಂದು ಕೇಳಲೇ ಇಲ್ಲ ಎಂದರು. ಮಾಜಿ ಶಾಸಕರಾದ ಬಿ.ಲಕ್ಕಪ್ಪ, ರಮೇಶ್‌ಬಾಬು, ಬಿ.ನಂಜಾಮರಿ, ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಸಿ.ಬಸವರಾಜು, ಚಿಕ್ಕಣ್ಣ, ಡಾ.ಎಸ್.ಜಿ.ಪರಮೇಶ್ವರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net