

ಮೈಸೂರು: ಪಡಿತರ ವ್ಯವಸ್ಥೆಗೆ ರಾಜ್ಯದ ರೈತರಿಂದಲೇ ಆಹಾರ ಧಾನ್ಯಗಳನ್ನು ಖರೀದಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಅನ್ನಭಾಗ್ಯ ಯೋಜನೆ ಅಡಿ ಪಡಿತರ ವ್ಯವಸ್ಥೆಗೆ ಅಗತ್ಯ ಇರುವ ಭಕ್ತ, ರಾಗಿ, ಜೋಳ, ಎಣ್ಣೆಕಾಳುಗಳನ್ನು ಪೂರೈಸಲು ರಾಜ್ಯದ ರೈತರು ಸಿದ್ಧವಿದ್ದು, ರಾಜ್ಯ ಸರ್ಕಾರ ಎಂಎಸ್‌ಪಿ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ಈ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕ ಜು.23ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸಂವಾದ ನಡೆಸಲಿದೆ. ರೈತರು, ವ್ಯಾಪಾರಸ್ಥರು ಮತ್ತು ಪರಿಣತರ ಸಭೆ ಕರೆದು ಚರ್ಚಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಸಮತೋಲನ ಕಾಯ್ದುಕೊಂಡಿರುವುದಾಗಿ ವಿಶ್ಲೇಷಿಸಿದ ಅವರು, ಗ್ಯಾರಂಟಿಗಳ ಜಾರಿಗಾಗಿ ಮೊದಲ ಆದ್ಯತೆ ನೀಡಿರುವುದರಿಂದ ಬೇರೆ ಕ್ಷೇತ್ರಗಳಿಗೆ ಅನುದಾನ ಕಡಿಮೆ ಆಗಿದೆ. ಈ ನಡುವೆ, ಯಾವುದೇ ಹೊಸ ಸರ್ಕಾರಕ್ಕೆ ಹಲವಾರು ಸವಾಲುಗಳು ಇರುತ್ತವೆ. ಈ ನಡುವೆಯೂ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೋಡೀಕರಿಸಲು ಕೂಡ ಆದ್ಯತೆ ನೀಡಿದ್ದು, ಅನುತ್ಪಾದಕ ವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಶಿಸ್ತನ್ನು ಪಾಲಿಸಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಎಪಿಎಂಸಿಗಳನ್ನು ಮತ್ತಷ್ಟು ಬಲಪಡಿಸಿ ರೈತಸ್ನೇಹಿ ನೀತಿಯನ್ನು ರೂಪಿಸಬೇಕು. ಕೃಷಿ ಕ್ಷೇತ್ರಕ್ಕೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ಸಾಲ ನೀಡುವ ಯೋಜನೆ ಕೂಡ ಸ್ವಾಗತಾರ್ಹ. ಕೃಷಿ ಉತ್ಪನ್ನಗಳಿಗೆ ನವೋದ್ಯಮ ಸ್ಪರ್ಶ ನೀಡಲು ಮುಂದಾಗಿರುವುದು ಉತ್ತಮ ನಿರ್ಧಾರ. ಆದರೆ, ಇದಕ್ಕೆ ನೀಲಿನಕ್ಷೆ ಬೇಕು ಎಂದು ಹೇಳಿದರು.
ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿ ಸಬಲೀಕರಣ ಮಾಡಬೇಕಿತ್ತು. ಕೃಷಿ ಉತ್ಪನ್ನಗಳಿಗೆ ರಾಜ್ಯ ಸರ್ಕಾರವೇ ಬೆಲೆ ನಿರ್ಧಾರ ಮಾಡಬೇಕಿತ್ತು. ಕೊಟ್ಟ ಮಾತಿನಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕಿತ್ತು. ಇದು ಈ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಈ ಸಂಬಂಧ ಸದ್ಯದಲ್ಲೇ ಸಿಎಂ ಅವರನ್ನು ಭೇಟಿಯಾಗಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.
21ರಂದು ಧಾರವಾಡದಲ್ಲಿ ಸಮಾವೇಶ
ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರನ್ನು ರಕ್ಷಿಸುವಂತೆ ಆಗ್ರಹಿಸಿದ ಬಡಗಲಪುರ ನಾಗೇಂದ್ರ, ಜು.21ರಂದು ರೈತ ಹುತಾತ್ಮರ ದಿನಾಚರಣೆ ಮತ್ತು ರೈತ ಚಳವಳಿಯ ಮುಂದಿನ ಹೋರಾಟ ಘೋಷಣಾ ಸಮಾವೇಶವನ್ನು ಧಾರವಾಡದ ಎಂ.ಜಿ. ಹಿರೇಮಠ ಕಲ್ಯಾಣ ಮಂಟಪದಲ್ಲಿ ರೈತ ಸಂಘ ಆಯೋಜಿಸಲಿದೆ ಎಂದು ತಿಳಿಸಿದರು.
ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ. ಮರಂಕಯ್ಯ ಇನ್ನಿತರರು ಇದ್ದರು.