

ಚಿತ್ರದುರ್ಗ: ಬಿಜೆಪಿ ಹೈಕಮಾಂಡ್ ಪಾಲಿಗೆ, ಕರ್ನಾಟಕವು ಚುನಾವಣೆ ಫಲವತ್ತಾದ ಭೂಮಿಯಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಶತ್ರು ರಾಷ್ಟ್ರದಂತೆ ನಮ್ಮ ರಾಜ್ಯವನ್ನು ಕಾಣುತ್ತಿರುವುದಕ್ಕೆ ಈ ಬಾರಿಯ ಕೇಂದ್ರದ ಬಜೆಟ್ ಸಾಕ್ಷಿಯಾಗಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಟೀಕಿಸಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ರಾಜ್ಯಕ್ಕೆ ಪದೇ ಪದೆ ಭೇಟಿ ನೀಡಿ ಭರವಸೆಗಳ ಮಹಾಪೂರವನ್ನೇ ಹರಿಸುವ ಬಿಜೆಪಿ ನಾಯಕರಿಗೆ ಬಜೆಟ್ ಸಂದರ್ಭದಲ್ಲಿ ಕನ್ನಡಿಗರ ನೆನಪಾಗುವುದಿಲ್ಲ. ಇದೊಂದು ಕರ್ನಾಟಕ ಜನರ ಪಾಲಿಗೆ ಮಹಾವಂಚನೆಯ ಬಜೆಟ್ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಬಿಡುಗಡೆ ಮಾಡದೆ ಇರುವುದು ಸೇರಿ ಚಿತ್ರದುರ್ಗ ಜಿಲ್ಲೆಯ ನಾನಾ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ವಂಚಿಸಲಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ರಾಜ್ಯದಲ್ಲಿ ಬಿಜೆಪಿಯನ್ನು ವಿಸರ್ಜಿಸಬೇಕು. ಇಲ್ಲವಾದಲ್ಲಿ ಕೇಂದ್ರ ನಾಯಕರ ಜೀತದಾಳುಗಳೆಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.