

ನವೀನ್ ಚಂದ್ರ ಶೆಟ್ಟಿ ಆನೇಕಲ್
ತಾಲೂಕಿನ ಅತ್ತಿಬೆಲೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಪ್ರತಿದಿನ ಬೆಂಗಳೂರಿನಿಂದ ಐನೂರಕ್ಕೂ ಹೆಚ್ಚು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಅತ್ತಿಬೆಲೆಗೆ ಬಂದುಹೋಗುತ್ತವೆ. ಆದರೆ ಅತ್ತಿಬೆಲೆಯಲ್ಲಿ ಬಸ್ ನಿಲ್ದಾಣವಿಲ್ಲದೆ ರಸ್ತೆಯ ಅಕ್ಕಪಕ್ಕ ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಕರೊನಾ ಸೋಂಕಿಗೂ ಮೊದಲು ಅತ್ತಿಬೆಲೆ ಪುರಸಭೆಗೆ ಹೊಂದಿಕೊಂಡಿರುವ ಜಾಗದಲ್ಲಿ ಬಸ್ ನಿಲ್ದಾಣ ಇತ್ತು. ಈ ನಿಲ್ದಾಣವನ್ನು ಕರೊನಾ ಸಂದರ್ಭದಲ್ಲಿ ಪುರಸಭೆಯಿಂದ ಮಾರುಕಟ್ಟೆಗೆ ಜಾಗ ನಿಗದಿಮಾಡಲಾಗಿತ್ತು. ಆದರೆ ಇಂದಿಗೂ ತೆರವು ಮಾಡದ ಕಾರಣ ಪ್ರತಿದಿನ ಬಸ್ ನಿಲ್ಲಿಸಲು ಚಾಲಕರು ಹಾಗೂ ನಿರ್ವಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಾಲಕರಿಗೆ ಬೆದರಿಕೆ: ಸರ್ಕಾರಿ ಬಸ್‌ಗಳು ರಸ್ತೆಯ ಬದಿಗಳಲ್ಲಿ, ಆರ್‌ಟಿಒ ಕಚೇರಿ ಬಳಿ, ಇಲ್ಲಿನ ಕಾಲೇಜು ಸಮೀಪ ಸೇರಿ ರಾಜ್ಯದ ಗಡಿ ಟೋಲ್ ಬಳಿಯೂ ನಿಲ್ಲಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ, ಎಲ್ಲೆಂದರಲ್ಲಿ ನಿಲ್ಲುತ್ತಿರುವುದರಿಂದ ಆಗಾಗ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿವೆ. ಹಲವಾರು ಬಾರಿ ಚಾಲಕರು ಹಾಗೂ ನಿರ್ವಾಹಕರ ಮೇಲೆ ಸ್ಥಳೀಯರು ಅಡ್ಡಾದಿಡ್ಡಿ ಬಸ್‌ಗಳನ್ನು ನಿಲ್ಲಿಸಬಾರದು ಎಂದು ಬೆದರಿಕೆ ಒಡ್ಡಿರುವ ನಿದರ್ಶನಗಳು ಸಾಕಷ್ಟಿವೆ.
ಆದಾಯ ನಷ್ಟ: ಒಂದು ಬಸ್ 4 ಟ್ರಿಪ್ ಸಂಚಾರ ಮಾಡಿದರೂ ಒಂದು ದಿನಕ್ಕೆ 500ಕ್ಕೂ ಹೆಚ್ಚು ಬಸ್‌ಗಳಿಂದ ಸಾವಿರಾರು ಟ್ರಿಪ್ ಆಗುತ್ತದೆ. ಆದರೆ ಅತ್ತಿಬೆಲೆ ನಿಲ್ದಾಣದಲ್ಲಿ ನಿಲುಗಡೆಗೆ ಸ್ಥಳವಿಲ್ಲದೆ ಅರ್ಧ ಕಿಮೀ ದೂರದಲ್ಲಿ ನಿಲುಗಡೆ ಮಾಡುವುದು ಅನಿವಾರ್ಯವಾಗಿದ್ದು, ಪ್ರಯಾಣಿಕರು ನಗರದ ಕಡೆ ಪ್ರಯಾಣಿಸಲು ತಮಿಳುನಾಡಿನಿಂದ ಬರುವ ಬಸ್‌ಗಳನ್ನೆ ಹೆಚ್ಚು ಅವಲಂಬಿಸುತ್ತಿದ್ದಾರೆ. ಇದರಿಂದ ಸಾರಿಗೆ ಆದಾಯಕ್ಕೂ ಕುತ್ತು ಬಂದಿದೆ.
ಟ್ರಾಫಿಕ್ ಕಿರಿಕಿರಿ: ಅತ್ತಿಬೆಲೆಯಿಂದ ಬೆಂಗಳೂರಿಗೆ ಹೋಗುವಾಗ ಅರ್ಧ ಕಿಮೀ ದೂರದಲ್ಲಿ ಎಲ್ಲೆಲ್ಲೋ ಬಸ್‌ಗಳು ನಿಲುಗಡೆಯಾಗುವುರಿಂದ ಬಸ್ ನಿಲುಗಡೆಯ ಸಮರ್ಪಕ ಮಾಹಿತಿ ಇಲ್ಲದಂತಾಗಿದೆ. ಜತೆಗೆ ಬೆಂಗಳೂರಿನಿಂದ ಬರುವ ಬಸ್‌ಗಳು ಅತ್ತಿಬೆಲೆ ವೃತ್ತದಲ್ಲಿರುವ ನಿಲ್ದಾಣದಲ್ಲಿ ನಿಲ್ಲಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದು, ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಎದುರಾಗಿದೆ.
ರಾಜ್ಯದ ಗಡಿ ಅತ್ತಿಬೆಲೆಗೆ ಬಸ್ ನಿಲ್ದಾಣವೂ ಇಲ್ಲ, ಘಟಕ ಸ್ಥಾಪನೆಗೂ ಅಧಿಕಾರಿಗಳು ಮುಂದಾಗಿಲ್ಲ. ಪ್ರತಿದಿನ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡುವ ಅನಿವಾರ್ಯತೆ ಇದೆ. ಕುಡಿಯುವ ನೀರು ಸೇರಿ ಯಾವುದೇ ಮೂಲ ಸೌಲಭ್ಯವಿಲ್ಲದೆ ಸಾರಿಗೆ ಸಿಬ್ಬಂದಿ ಪರದಾಡುವಂತಾಗಿದೆ. ವರದರಾಜು, ಸ್ಥಳೀಯ ಅತ್ತಿಬೆಲೆಯಲ್ಲಿ ಬಿಎಂಟಿಸಿ ಡಿಪೋ ನಿರ್ಮಾಣಕ್ಕೆ ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ, ಇದಕ್ಕಾಗಿ 5 ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸಲಾಗಿತ್ತು, ಆದರೆ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಿರುವ ಜಾಗದ ವಿಚಾರದಲ್ಲಿ ಕೋರ್ಟ್‌ನಲ್ಲಿ ವಿವಾದವಿರುವುದರಿಂದ ನಿಲ್ದಾಣದ ಅಭಿವೃದ್ಧಿಗೆ ತಡೆ ಬಿದ್ದಿದೆ. ಸಮಸ್ಯೆ ಬಗ್ಗೆ ಅರಿವಿದ್ದು, ಸರಿಪಡಿಸುವ ಕಡೆ ಗಮನ ನೀಡಲಾಗಿದೆ. ಬಿ.ಶಿವಣ್ಣ, ಶಾಸಕ