

ನಾಗಮಂಗಲ: ನಾಡು, ನುಡಿ, ನೆಲ, ಜಲ ವಿಚಾರ ಬಂದಾಗ ರಾಜ್ಯಕ್ಕೆ ಅನ್ಯಾಯವಾಗುವಂತಹ ಸಂದರ್ಭಗಳಲ್ಲಿ ಜೆಡಿಎಸ್ ಮಾತ್ರ ರಾಜ್ಯದ ಪರವಾಗಿ ಧ್ವನಿಯಾಗಿ ಹೋರಾಟ ಮಾಡುತ್ತಿದ್ದು ರಾಜ್ಯದ ಉಳಿವಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಶಾಸಕ ಸುರೇಶ್‌ಗೌಡ ಮನವಿ ನೀಡಿದರು.
ತಾಲೂಕಿನ ತುಪ್ಪದಮಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಅಧಿಕಾರ ಸಿಕ್ಕಂತಹ ಅಲ್ಪಾವಧಿಯಲ್ಲಿಯೇ ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ರೈತರ ಪರವಾಗಿ ಧ್ವನಿ ಎತ್ತುವ ಏಕೈಕ ಪಕ್ಷ ಜೆಡಿಎಸ್ ಆಗಿದೆ.
ಬಿಜೆಪಿಯವರು ಕೇಂದ್ರ ಮತ್ತು ರಾಜ್ಯ ಎರಡು ಕಡೆಗಳಲ್ಲಿಯೂ ಅಧಿಕಾರದಲ್ಲಿದ್ದರೂ ಕೂಡ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಧರ್ಮ-ಧರ್ಮಗಳ ನಡುವೆ ಕೋಮುಗಲಭೆಗಳನ್ನು ಹುಟ್ಟು ಹಾಕಿ ತಮ್ಮ ರಾಜಕೀಯ ಮಾಡುವಲ್ಲಿ ಬಿಜೆಪಿ ನಿರತವಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ಎಂದು ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಮತದಾರರು ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿಯನ್ನು ಸಿಎಂ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಪ್ರಚಾರಕ್ಕೆ ಆಗಮಿಸಿದ ಶಾಸಕ ಸುರೇಶ್‌ಗೌಡ ಅವರನ್ನು ಮಹಿಳೆಯರು ಪೂರ್ಣಕುಂಭ, ಬೆಲ್ಲದ ಆರತಿ ಮಾಡುವ ಮೂಲಕ ಸ್ವಾಗತ ಕೋರಿದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಎನ್.ಅಪ್ಪಾಜಿಗೌಡ ಮತ್ತು ಕೆ.ಟಿ.ಶ್ರೀಕಂಠೇಗೌಡ ಹಾಗೂ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ, ಪುರಸಭೆ ಸದಸ್ಯ ಶಂಕರಲಿಂಗೇಗೌಡ, ವಿಜಯ್‌ಕುಮಾರ್, ಮುಖಂಡರಾದ ನಾಗೇಶ್, ರಮೇಶ್, ಚನ್ನಪ್ಪ ಮತ್ತಿತರಿದ್ದರು.