ರಾಜ್ಯದ ಅಭಿವೃದ್ಧಿಯಲ್ಲಿ ಒಕ್ಕಲಿಗರ ಕೊಡುಗೆ ಅಪಾರ

17 KRN-2
Published on

ಕೆ.ಆರ್.ನಗರ: ರಾಜ್ಯದ ಅಭಿವೃದ್ಧಿಯಲ್ಲಿ ಒಕ್ಕಲಿಗರ ಸಮಾಜದವರ ಕೊಡುಗೆ ಅಪಾರವಾಗಿದ್ದು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಐಟಿಬಿಟಿ ತಂದ ಕಾರಣ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.


ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯಕ್ಕೆ ತಂತ್ರಜ್ಞಾನ ತಂದ ಕಾರಣದಿಂದಾಗಿ ಗ್ರಾಮೀಣ ಮಕ್ಕಳು ವಿದೇಶ ಪ್ರವಾಸ ಮಾಡುವಂತಾಯಿತು ಎಂದರು.


ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದ ಸಂದರ್ಭದಲ್ಲಿ 204 ಕೆರೆಗಳಿತ್ತು. ನಗರ ಅಭಿವೃದ್ಧಿ ಹೊಂದಿದಂತೆ ಕೆರೆಗಳನ್ನು ಮುಚ್ಚುತ್ತಾ ಬರಲಾಯಿತು. ನಾನು ಅರಣ್ಯ ಮಂತ್ರಿಯಾಗಿದ್ದಾಗ ಒತ್ತುವರಿಯಾಗಿದ್ದ 80 ಕೆರೆಗಳನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸಲಾಯಿತು ಎಂದು ತಿಳಿಸಿದರು.


ಶಾಸಕ ಡಿ.ರವಿಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಂಪೇಗೌಡರ ಜಯಂತಿ ಆಚರಣೆ ಜಾರಿಗೆ ತಂದಿರುವುದರ ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇಂತಹ ಮಹಾನ್ ಪುರುಷರನ್ನು ಜಾತಿಗೆ ಸೀಮಿತಗೊಳ್ಳಿಸದೆ ಎಲ್ಲರೂ ಸ್ಮರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ಕೃಷ್ಣ ಪ್ರಧಾನ ಭಾಷಣ ಮಾಡಿದರು. ಪುರಸಭೆ ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಶಂಕರ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪರಶುರಾಮ್, ಪ್ರಧಾನ ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ಕೆಪಿಸಿಸಿ ಸದಸ್ಯ ಎಸ್.ಪಿ.ತಮ್ಮಯ್ಯ, ಡಿಸಿಸಿ ಕಾರ್ಯದರ್ಶಿ ಎಚ್.ಪಿ.ಗೋಪಾಲ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ತಾ.ಪಂ.ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಮುಖಂಡ ವೈ.ಎಸ್.ಜಯಂತ್, ತಹಸೀಲ್ದಾರ್‌ಗಳಾದ ಎಂ.ಜಿ.ಸಂತೋಷ್‌ಕುಮಾರ್, ತಿಮ್ಮಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net