ರಾಜ್ಯದ 95 ಆಶ್ರಮ ಶಾಲೆಗಳ ಅಧ್ಯಯನ ವರದಿ ಬಿಡುಗಡೆ

14rajesh2
Published on

ಚಾಮರಾಜನಗರ: ರಾಜ್ಯದಲ್ಲಿ ಸುಮಾರು 120 ಕ್ಕಿಂತಲೂ ಹೆಚ್ಚು ಆಶ್ರಮ ವಸತಿ ಶಾಲೆಗಳು ಇದ್ದು, ಇದರಲ್ಲಿ 95 ಶಾಲೆಗಳನ್ನು ಅಧ್ಯಯನ ಮಾಡಿ ಬುಡಕಟ್ಟು ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಶಾಲೆಯ ನಿಯಮಗಳು ಹಾಗೂ ಕಾರ್ಯನಿರ್ವಹಣೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ.ಡಿ.ಸಿ.ನಂಜುಂಡ ಹೇಳಿದರು.

‘ಕರ್ನಾಟಕದಲ್ಲಿ ಆಶ್ರಮ ಶಾಲೆಗಳು ಮತ್ತು ಬುಡಕಟ್ಟು ಶಿಕ್ಷಣದ ಮೇಲೆ ಇದರ ಪ್ರಭಾವ’ ಕುರಿತ ಸಂಶೋಧನಾ ವರದಿಯನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯದಲ್ಲಿರುವ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮೂಲಸೌಕರ್ಯಗಳ ಕೊರತೆ ಎಲ್ಲಾ ಕಡೆಗಳಲ್ಲೂ ಕಂಡುಬರುತ್ತದೆ. ಅದನ್ನು ಹೊರತುಪಡಿಸಿ ನೋಡುವುದೆ ಆದರೇ, ಆಶ್ರಮ ಶಾಲೆಗಳ ತರಗತಿಗಳಲ್ಲಿ ಏಕ ಸಂಸ್ಕೃತಿ ಕಂಡುಬರುತ್ತಿದ್ದು, ಇದರಿಂದ ಸಾಂಸ್ಕೃತಿಕ ವೈವಿಧ್ಯತೆಗೆ ಕುಂದುಂಟಾಗಿದೆ. ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಸಂಪರ್ಕ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದ್ದು, ಕಲಿಯುವ ಹಂಬಲ ಕಾಣಿಸುತ್ತಿಲ್ಲ ಎಂದು ವಿವರಣೆ ನೀಡಿದರು.

ರಾಜ್ಯದ ಹಲವಾರು ಬುಡಕಟ್ಟು ಶಾಲೆಗಳಲ್ಲಿ ವಿದ್ಯುತ್, ಇಂಟರ್‌ನೆಟ್ ಹಾಗೂ ಇನ್ನಿತರೆ ಸೌಲಭ್ಯಗಳ ಕೊರತೆ ಕಾಣುತ್ತಿದೆ. ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಸಮುದಾಯ, ಶಾಲೆ ಮತ್ತು ಪಾಲಕರ ಹೊಂದಾಣಿಕೆ ಕಾಣಿಸುತ್ತಿಲ್ಲ. ಈ ಮೂವರಲ್ಲಿ ಒಳಗೊಳ್ಳುವಿಕೆ ಮೂಡಿದಾಗ ಮಾತ್ರ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಶ್ರಮ ಶಾಲೆಗಳ ನಿಯಾಮವಳಿಗಳು, ಕಾರ್ಯನಿರ್ವಹಣೆಯಲ್ಲಿ ಬದಲಾಗಬೇಕು. ಇಲ್ಲವಾದರೇ ಹಾಡಿ ಶಾಲೆಗಳಿಗೆ, ಎನ್‌ಜಿಓಗಳಿಗೆ ಇವುಗಳನ್ನು ವಹಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಆದಿವಾಸಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ, ಡಾ.ಕೃಷ್ಣಮೂರ್ತಿ, ಆದಿವಾಸಿ ಮುಖಂಡ ಮಹದೇವ ಹಾಜರಿದ್ದರು.

ವರದಿಯಲ್ಲಿರುವ ಸಲಹೆಗಳೇನು?

ಈಗಾಗಲೇ ಸರ್ಕಾರಕ್ಕೆ ಆಶ್ರಮಶಾಲೆಗಳ ಕುರಿತಾದ ವರದಿಯನ್ನು ಸಲ್ಲಿಸಲಾಗಿದ್ದು, ವರದಿಯಲ್ಲಿ ಬುಡಕಟ್ಟು ಆಶ್ರಮ ಶಾಲೆಗಳ ಅಭಿವೃದ್ಧಿಗೆ 31 ಸಲಹೆಗಳನ್ನು ನೀಡಲಾಗಿದೆ. ವಿಜ್ಞಾನ ಕಲಿಕೆ ಹೆಚ್ಚಿನ ಒತ್ತು ನೀಡಬೇಕು, ಭಾಷಾ ಕಲಿಕೆಗೆ ಆದ್ಯತೆ ನೀಡಬೇಕು, ತಂತ್ರಜ್ಞಾನಯುಕ್ತ ಕಲಿಕೆ ಒದಗಿಸಬೇಕು, ಗಣಿತ ಕಲಿಕೆಗೆ ಒತ್ತು ನೀಡಬೇಕು. ಪಾಲಕರನ್ನು ಬುಡಕಟ್ಟು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ ಪಾಲಕರೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ನಿಯಮಿತ ಆರೋಗ್ಯ ತಪಾಸಣೆ ಮಾಡಬೇಕು. ಈ ಶಾಲೆಗಳಲ್ಲಿ ಅಧ್ಯಯನ ಮಾಡಿದವರಿಗೆ ಆದ್ಯತೆ ನೀಡಬೇಕು. ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉತ್ತಮ ಗ್ರಂಥಾಲಯಗಳನ್ನು ಹೊಂದಿರಬೇಕು. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಆಶ್ರಮ ಶಾಲೆಗಳಿಗೆ ಹೆಚ್ಚಿನ ಬಲನೀಡಬೇಕು ಎಂಬ ಮತ್ತಷ್ಟು ಸಲಹೆಗಳನ್ನು ವರದಿಯಲ್ಲಿ ಹೇಳಲಾಗಿದೆ.

ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಬಹುಮುಖ್ಯವಾಗಿ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಕೇರಳಾ ಮಾದರಿ ಶಿಕ್ಷಣವನ್ನು ಆಶ್ರಮ ಶಾಲೆಗಳಲ್ಲಿ ರೂಪಿಸಬೇಕು. ಆದಿವಾಸಿ, ಬುಡಕಟ್ಟು ಜನರಿಗೆ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಈ ಮೂಲಕ ಆಶ್ರಮ ಶಾಲೆಗಳನ್ನು ಮೇಲದರ್ಜೆಗೆ ಏರಿಸುವ ಕಾಳಜಿಯನ್ನು ಸರ್ಕಾರ ತೋರಬೇಕಿದೆ.

-ಡಾ.ರತ್ನಮ್ಮ, ಮುಖಂಡರು, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net