

ಬೆಳಗಾವಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮ ಒನ್’ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈವರೆಗೆ ರಾಜ್ಯಾದ್ಯಂತ ಯೋಜನೆಯಡಿ ಬರೋಬ್ಬರಿ 7 ಲಕ್ಷ ಜನರಿಗೆ ವಿವಿಧ ಸೇವೆ ಕಲ್ಪಿಸಲಾಗಿದೆ.
ರಾಜ್ಯದ 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಓನ್’ ಯೋಜನೆ ಅನುಷ್ಠಾನಗೊಂಡಿದೆ. 12 ಜಿಲ್ಲೆಗಳ ಗ್ರಾಪಂನಲ್ಲೇ ಜನರಿಗೆ ಎಲ್ಲ ಸೇವೆಗಳು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳ ಜನರು ತಾಲೂಕು ಕಚೇರಿಗಳಿಗೆ ಅಲೆಯುವ ತಾಪತ್ರಯ ದೂರಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರಗಳು ಗ್ರಾಮ ಒನ್‌ನಲ್ಲೇ ಲಭ್ಯವಾಗುತ್ತಿರುವುದಕ್ಕೆ ಯೋಜನೆ ಬಗ್ಗೆ ಯುವಜನತೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಾರ್ಮಿಕ ಗುರುತಿನ ಚೀಟಿ, ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್, ಪಹಣಿ ಪತ್ರಕ್ಕಾಗಿ ಅತಿ ಹೆಚ್ಚು ಅರ್ಜಿಗಳು ಕೇಂದ್ರದಲ್ಲಿ ಸಲ್ಲಿಕೆಯಾಗುತ್ತಿವೆ. ದಾವಣಗೆರೆ ಜಿಲ್ಲೆ ‘ಗ್ರಾಮ್ ಒನ್’ ಮೂಲಕ 2,82,151 ಜನರಿಗೆ ವಿವಿಧ ಸೇವೆ ಕಲ್ಪಿಸಿ, ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ.
ಲಾಭ ಪಡೆದವರು 7 ಲಕ್ಷ ಜನ: 7,00,665 ಜನರಿಗೆ ವಿವಿಧ ಸೇವೆಗಳು ಈಗಾಗಲೇ ಲಭ್ಯವಾಗಿವೆ. ದಾವಣಗೆರೆ ಜಿಲ್ಲೆಯ 201 ‘ಗ್ರಾಮ ಒನ್’ ಕೇಂದ್ರಗಳಿಂದ 2,82,151 ಜನರಿಗೆ ವಿವಿಧ ಸೇವೆ ಕಲ್ಪಿಸಲಾಗಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ 295 ಕೇಂದ್ರಗಳಲ್ಲಿ 1,88,947 ಜನರಿಗೆ, ಚಿಕ್ಕಮಗಳೂರು ಜಿಲ್ಲೆಯ 185 ಗ್ರಾಮ ಒನ್ ಕೇಂದ್ರಗಳಲ್ಲಿ 1,42,470 ಜನರಿಗೆ ಸೇವೆ ಕಲ್ಪಿಸಲಾಗಿದೆ. ಬೀದರ ಜಿಲ್ಲೆಯ 269 ಕೇಂದ್ರಗಳಿಂದ 58,829 ಜನರಿಗೆ, ಹಾವೇರಿ 278 ಕೇಂದ್ರಗಳಲ್ಲಿ 6,787 ಜನರಿಗೆ, ಬೆಳಗಾವಿ ಜಿಲ್ಲೆಯ 778 ಕೇಂದ್ರಗಳಲ್ಲಿ 5,876 ಜನರಿಗೆ, ಶಿವಮೊಗ್ಗ 223 ಕೇಂದ್ರಗಳಲ್ಲಿ 3,382, ತುಮಕೂರ 237 ಕೇಂದ್ರಗಳಲ್ಲಿ 3,221 ಜನರಿಗೆ ಸೇವೆ ದೊರೆತಿದೆ. ಕೊಪ್ಪಳ 233 ಕೇಂದ್ರಗಳಲ್ಲಿ 3,164 ಜನರಿಗೆ, ಬಳ್ಳಾರಿ ಜಿಲ್ಲೆಯ 143 ಕೇಂದ್ರಗಳಲ್ಲಿ 3,013 ಜನರಿಗೆ, ಕೊಡಗು 79 ಕೇಂದ್ರಗಳಲ್ಲಿ 1,287, ಉಡುಪಿ 105 ಕೇಂದ್ರಗಳಲ್ಲಿ 1,538 ಜನರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಕಲ್ಪಿಸಲಾಗಿದೆ.
ವಿವಿಧ ಸೇವೆಗಳಿಗಾಗಿ ಜನರು, ಹಲವು ಕಡೆಗಳಲ್ಲಿ ಹೋಗಬೇಕಾಗಿತ್ತು. ಈಗ ಗ್ರಾಮ ಒನ್ ಕೇಂದ್ರದ ಮೂಲಕ ಒಂದೇ ಸೂರಿನಲ್ಲಿ 750ಕ್ಕೂ ಹೆಚ್ಚು ಸೇವೆಗಳು ಲಭ್ಯವಾಗುತ್ತಿರುವುದರಿಂದ ಈ ಯೋಜನೆ ಜನಸ್ನೇಹಿಯಾಗಿದೆ. ಪ್ರಮುಖವಾಗಿ ‘ಗ್ರಾಮ ಒನ್’ ಕೇಂದ್ರಗಳು ಬೆಳಗ್ಗೆ 8 ಗಂಟೆಗೆ ಬಾಗಿಲು ತೆರೆಯುತ್ತಿರುವುದರಿಂದ ಹಳ್ಳಿ ಜನರು 8 ಗಂಟೆಗೆ ಕೆಲಸ ಮುಗಿಸಿಕೊಂಡು ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಸಮಯದ ಉಳಿತಾಯದ ಜತೆಗೆ ಪ್ರಯಾಣದ ಖರ್ಚು, ಮಧ್ಯವರ್ತಿಗಳ ಹಾವಳಿ ಇಲ್ಲದೆ ಸುಲಭವಾಗಿ ಸೇವೆ ಪಡೆಯುತ್ತಿದ್ದಾರೆ.
ಫೆಬ್ರವರಿ ಕೊನೆ ವಾರದಲ್ಲಿ ‘ಗ್ರಾಮ ಒನ್’ ಯೋಜನೆಯನ್ನು ಇನ್ನೂ 10 ಜಿಲ್ಲೆಗಳಲ್ಲಿ ವಿಸ್ತರಿಸುವುದಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬಾಗಲಕೋಟೆ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಗದಗ, ಕೋಲಾರ, ರಾಮನಗರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತಯಾರಿ ನಡೆದಿದೆ. ಈ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 2,268 ಕೇಂದ್ರಗಳು ಕಾರ್ಯಾರಂಭವಾಗಲಿವೆ.
| ಜಗದೀಶ ಹೊಂಬಳಿ ಬೆಳಗಾವಿ