ರಾಜ್ಯಕ್ಕೆ ಕಾಂಗ್ರಸ್ ನಾಯಕರಿಂದ ದ್ರೋಹ:ಸಚಿವ ಎಚ್.ಡಿ.ರೇವಣ್ಣ ಆರೋಪ

ರಾಜ್ಯಕ್ಕೆ ಕಾಂಗ್ರಸ್ ನಾಯಕರಿಂದ ದ್ರೋಹ:ಸಚಿವ ಎಚ್.ಡಿ.ರೇವಣ್ಣ ಆರೋಪ
Published on

ಹಾಸನ : ಕಾಂಗ್ರಸ್ ನಾಯಕರು ಅಧಿಕಾರಕ್ಕೆ ಬರುವ ಮುನ್ನ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ. ಬೆಲೆ ನಿಗದಿಪಡಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ದ್ರೋಹ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರ ಸಚಿವರ ಬಳಿ ಮನವಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಾಂಗ್ರೆಸ್ ನಾಯಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮಾ. 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ನಮ್ಮ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಉದ್ಘಾಟಿಸಲು ಕಟ್ಟಡಗಳ ಪಟ್ಟಿಯನ್ನ ಸಿದ್ಧಪಡಿಸುವುದೇ ಜಿಲ್ಲಾಧಿಕಾರಿಗಳ ಕೆಲಸವಾಗಿದೆ.ಹೊಳೆನರಸೀಪುರದಲ್ಲಿ ಪಶು ಆಸ್ಪತ್ರೆಯೊಂದು ಆರಂಭವಾಗಿ ವರ್ಷ ಕಳೆದಿದೆ. ಈಗ ಅದರ ಉದ್ಘಾಟನೆಗೆ ತಯಾರಿ ನಡೆದಿದೆ. ಇಷ್ಟೇನಾ ಕಟ್ಟಡಗಳ ಪಟ್ಟಿ ಅಂತ ಜಿಲ್ಲಾಧಿಕಾರಿಗಳೇ ಕೇಳ್ತಿದಾರೆ. ಪ್ರತಿ ತಾಲ್ಲೂಕಿನಿಂದ ಇಷ್ಟಿಷ್ಟು ಜನರನ್ನು ಕರೆದುಕೊಂಡು ಬರಬೇಕೆಂದು ಜಿಲ್ಲಾಧಿಕಾರಿಗಳೇ ಕಟ್ಟಪ್ಪಣೆ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಕೆಲಸ ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ಅರಸೀಕೆರೆಗೆ ಇಂಜಿನೀಯರಿಂಗ್ ಕಾಲೇಜು, ರಸ್ತೆ, ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಕಲ್ಪಿಸಿದ್ದೆವು. ಅಧಿಕಾರಿಗಳು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಕಾರ್ಯಕ್ರಮಕ್ಕೆ ಜನರನ್ನು ಕರೆತರುವುದೇ ದೊಡ್ಡ ಕೆಲಸವಾಗಿದೆ. ಬರದಿಂದ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸಬೇಕೆಂಬ ಇಚ್ಛಾಶಕ್ತಿ ಜಿಲ್ಲಾಧಿಕಾರಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಯಾರಿಗೂ ಇಲ್ಲವಾಗಿದೆ. ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ರೈತರ ಬೆಳೆ ನಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲುತ್ತಾರೆ. ಕಳೆದ ಒಂಬತ್ತು ತಿಂಗಳಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ಶಾಸಕರಿಗೆ ಇದೆ. ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮಾಧಾನ ಇರುವ ಶಾಸಕರು ಕುಪೇಂದ್ರ ರೆಡ್ಡಿಗೆ ಬೆಂಬಲಿಸುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net