ರಾಜ್ಯಕ್ಕೆ ಆರು ಆಕ್ಸಿಜನ್ ಟ್ಯಾಂಕರ್ ಮಂಜೂರು

Govind
Published on

ಬೆಳಗಾವಿ: ಆಕ್ಸಿಜನ್ ಸರಬರಾಜು ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 15 ರಿಂದ 20 ಕೆ.ಎಲ್. ಸಾಮರ್ಥ್ಯದ ಆರು ಟ್ಯಾಂಕರ್‌ಗಳು ಮಂಜೂರಾಗಿದ್ದು, ಮೇ 15ಕ್ಕೆ ರಾಜ್ಯಕ್ಕೆ ಬರಲಿವೆ ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಆರು ಟ್ಯಾಂಕರ್‌ಗಳಲ್ಲಿ ಬೆಳಗಾವಿಗೆ 20 ಕೆ.ಎಲ್. ಸಾಮರ್ಥ್ಯದ ಒಂದು ಆಕ್ಸಿಜನ್ ಟ್ಯಾಂಕರ್ ಮೇ 16ರ ಬಳಿಕ ಜಿಲ್ಲೆಗೆ ಬರಲಿದೆ ಎಂದು ತಿಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುತುವರ್ಜಿ ವಹಿಸಿ ನಮ್ಮ ಜಿಲ್ಲೆಗೆ ಟ್ಯಾಂಕರ್ ಮಂಜೂರು ಮಾಡಿಸಿದ್ದಾರೆ. ಜತೆಗೆ ವಿಶೇಷ ಕಾಳಜಿ ವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಆಕ್ಸಿಜನ್, ಬೆಡ್ ಸಲುವಾಗಿ ಸರ್ಕಾರಕ್ಕೆ ಪದೇ ಪದೆ ಒತ್ತಾಯ ಮಾಡಿದ ಪರಿಣಾಮ ಇಂದು 16 ಕೆ.ಎಲ್. ಸಾಮರ್ಥ್ಯದಿಂದ 20 ಕೆ.ಎಲ್. ಆಕ್ಸಿಜನ್ ಹೆಚ್ಚಿಸಿದ್ದಾರೆ. ಇದನ್ನು 30 ಕೆ.ಎಲ್.ಗೆ ಹೆಚ್ಚಿಸುವಂತೆ ಸಚಿವ ಜಗದೀಶ ಶೆಟ್ಟರ್ ಅವರಿಗೂ ಮನವಿ ಮಾಡಿದ್ದೇನೆ. ಅವರೂ ಸಹಿತ ಒಪ್ಪಿಗೆ ನೀಡಿದ್ದಾರೆ. ನಾನು ಉಸ್ತುವಾರಿ ಮಂತ್ರಿಯಾದ ಬಳಿಕ ಜಿಲ್ಲೆಗೆ 3 ಪಟ್ಟು ರೆಮ್‌ಡಿಸಿವಿರ್ ಇಂಜಕ್ಷನ್ ಹೆಚ್ಚಿಸಿದ್ದೇನೆ. ಇನ್ನು ಆಕ್ಸಿಜನ್ ಸರಬರಾಜು ಕೆಲ ದಿನಗಳಲ್ಲಿ ಸರಳವಾಗಲಿದ್ದು, ಆಕ್ಸಿಜನ್ ಬೆಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸುತ್ತೇವೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 50 ಆಕ್ಸಿಜನ್ ಬೆಡ್ ಮಾಡುತ್ತೇವೆ. ಒಟ್ಟಾರೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net