

ಚಿತ್ರದುರ್ಗ: ಭೂ ಸುಧಾರಣೆ ಕಾಯ್ದೆ, ಹಾವನೂರು ವರದಿ, ಹಿಂದುಳಿದ ವರ್ಗಗಳ ಅಭಿವೃದ್ಧಿ, ವಸತಿ ನಿಲಯಗಳ ಸ್ಥಾಪನೆ ಸೇರಿ ಅನೇಕ ಕ್ರಾಂತಿಕಾರಕ ಯೋಜನೆಗಳ ಮೂಲಕ ಡಿ.ದೇವರಾಜು ಅರಸು ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಣ್ಣಿಸಿದರು.
ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂನಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 108ನೇ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಜ್ಯಕಂಡ ಅಪ್ರತಿಮ ನಾಯಕರಾದ ಅರಸು ಅವರು ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ದೂರದೃಷ್ಠಿಯಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಸಾಮಾಜಿಕ ಕಳಕಳಿಯ ಹರಿಕಾರರಾಗಿದ್ದಾರೆ ಎಂದರು.
ಅರಸು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿ ರಾಜ್ಯದ ಏಕೀಕರಣಕ್ಕೆ ಮಹತ್ವ ನೀಡಿ ಮುನ್ನಡೆಸಿದ ಧೀಮಂತ ವ್ಯಕ್ತಿ. ಪ್ರಗತಿಪರ ಯೋಜನೆಗಳು ಕೂಡ ಅವಿಸ್ಮರಣೀಯ. ಅವರ ಆದರ್ಶಗಳೇ ಇಂದಿಗೂ ಸಮಾಜವನ್ನು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಶ್ರಮಿಸಿದವರಲ್ಲಿ ಅರಸು ಪ್ರಮುಖರು. ರಾಜ್ಯದ ಇತಿಹಾಸದಲ್ಲಿ ಅರಸು ಯುಗ ಸುವರ್ಣಯುಗ ಎಂದು ದಾಖಲಾಗಿದೆ ಎಂದು ಸ್ಮರಿಸಿದರು.
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಎಲ್ಲರಿಗೂ ಸಮಾನ ಅವಕಾಶ ನೀಡುವ ಉದ್ದೇಶ ಡಿ.ದೇವರಾಜ ಅರಸು ಅವರದಾಗಿತ್ತು. ಎಲ್ಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಅವರಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡಿದರೆ ನಾಯಕರಾಗಿ ಹೊರಹೊಮ್ಮಬಹುದು ಎಂದು ಸಲಹೆ ನೀಡಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಭವ್ಯ ಮೆರವಣಿಗೆ: ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗದಿಂದ ಹೊರಟ ಡಿ.ದೇವರಾಜ ಅರಸು ಭಾವಚಿತ್ರ ಮೆರವಣಿಗೆಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ಗಾಂಧಿ, ಎಸ್‌ಬಿಐ, ಅಂಬೇಡ್ಕರ್, ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಿ ತರಾಸು ರಂಗಮಂದಿರ ತಲುಪಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಇತರರಿದ್ದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಎಸ್‌ಪಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಆರ್.ಸುಬ್ರಾನಾಯಕ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ವಕೀಲ ಪ್ರತಾಪ್‌ಜೋಗಿ ಇತರರಿದ್ದರು.