ರಾಜ್ಯಕ್ಕೆ ಅನ್ಯಾಯವಾಗಲು ವಕೀಲ ನಾರಿಮನ್ ಕಾರಣ

14-pnp 1 prasannakumar
Published on

ಪಾಂಡವಪುರ: ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಪದೇ ಪದೆ ಅನ್ಯಾಯವಾಗಲು ಸುಪ್ರೀಂಕೋರ್ಟ್‌ನ ಈ ಹಿಂದಿನ ಹಿರಿಯ ವಕೀಲ ನಾರಿಮನ್ ಹಾಗೂ ರಾಜ್ಯವನ್ನಾಳಿದ ಮೂರು ಪಕ್ಷಗಳು ಕಾರಣ ಎಂದು ರೈತ ಹೋರಾಟಗಾರ ಹಾಗೂ ಚಿಂತಕ ಅರ್ಜುನಹಳ್ಳಿ ಪ್ರಸನ್ನಕುಮಾರ್ ದೂರಿದರು.


ಕಾವೇರಿ ವಿಷಯದಲ್ಲಿ ನಾರಿಮನ್ ರಾಜ್ಯದ ಪರವಾಗಿದ್ದರು ಎನ್ನುವುದಕ್ಕಿಂತ ರಾಜ್ಯ ಸರ್ಕಾರವನ್ನು ದಿಕ್ಕುತಪ್ಪಿಸಿ ತಮಿಳುನಾಡಿಗೆ ನೀರು ಹರಿಸಲು ಸಹಕಾರ ನೀಡಿದರು ಎನ್ನಬಹುದು. ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ವಿಫಲವಾದವು. 2001ರಲ್ಲಿ ತಮಿಳುನಾಡು ಸೇರಿದಂತೆ ಕಾವೇರಿ ಜಲಾನಯನದ ಪಾಂಡಿಚೇರಿ, ಕೇರಳ ರಾಜ್ಯಗಳು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ನೀರಿಗಾಗಿ ಬೇಡಿಕೆ ಇಟ್ಟು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ಆದರೆ, ರಾಜ್ಯ ಸರ್ಕಾರ ಆ ಬಗ್ಗೆ ಯೋಚನೆಯನ್ನೂ ಮಾಡಲಿಲ್ಲ. ಈ ಎಲ್ಲ ಕಾರಣಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಕಾವೇರಿ ನ್ಯಾಯಾಧಿಕರಣ ರಚನೆಯಾದಾಗಲೇ ರಾಷ್ಟ್ರೀಯ ಜಲನೀತಿ ಇಲ್ಲದ ಕಾರಣ ನ್ಯಾಯಾಧಿಕರಣವನ್ನು ಒಪ್ಪಲು ಸಾಧ್ಯವಿಲ್ಲವೆಂದು ನಮ್ಮ ಸರ್ಕಾರ ತಿರಸ್ಕರಿಸಬೇಕಿತ್ತು. ಕರ್ನಾಟಕಕ್ಕಿಂತಲೂ ಮೊದಲು 1987ರಲ್ಲೇ ಪಂಜಾಬ್, ರಾಜಸ್ಥಾನ, ಹರಿಯಾಣ ಒಳಗೊಂಡಂತೆ ನ್ಯಾಯಾಧಿಕರಣ ರಚನೆಯಾಗಿತ್ತು. ಆದರೆ, ನೀರು ಹಂಚಿಕೆ ವಿಷಯವಾಗಿ ಪಂಜಾಬ್ ಒಮ್ಮೆಯೂ ನ್ಯಾಯಾಧಿಕರಣದ ಆದೇಶವನ್ನು ಪಾಲಿಸಲೇ ಇಲ್ಲ. ಆದರೆ, ನಮ್ಮ ಸರ್ಕಾರಗಳು ನ್ಯಾಯಾಧಿಕರಣವನ್ನು ಒಪ್ಪಿಕೊಂಡಾಗಿವೆ. ಈಗ ಏನೂ ಮಾಡಲು ಸಾಧ್ಯವಿಲ್ಲ. ವಕೀಲ ನಾರಿಮನ್ ಯಾವ್ಯಾವ ರೀತಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದು ದಾಖಲಾಗಿದೆ ಎಂದು ಹೇಳಿದರು.


ಕಾರ್ಖಾನೆಗಳು ಬಂದ್: ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಬಂದು ತಮಿಳುನಾಡಿಗೆ ನೀರು ಹರಿದು ಕೆಆರ್‌ಎಸ್ ಬರಿದಾದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಜತೆಗೆ, ಮನ್‌ಮುಲ್‌ನಂತಹ ದೊಡ್ಡ ಸಹಕಾರ ಸಂಸ್ಥೆಗಳೂ ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಕಾವೇರಿ ವಿಷಯದಲ್ಲಿ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ನೀಡುವ ತೀರ್ಪು ತಪ್ಪೆಂದು ಹೇಳಲು ಸಾಧ್ಯವಿಲ್ಲ. ಅವರು ದಾಖಲೆಗಳನ್ನು ನೋಡಿಕೊಂಡು ತೀರ್ಪು ನೀಡುತ್ತಾರೆ ಅಷ್ಟೇ ಎಂದರು.


ಕರಾರು ಮುಕ್ತಾಯಗೊಂಡಿದೆ: ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ 1924ರಲ್ಲಿ ಮಾಡಿಕೊಟ್ಟಿದ್ದ 50 ವರ್ಷಗಳ ಕರಾರು ಅವಧಿ 1975ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿಯೇ ತಮಿಳುನಾಡು ಸರ್ಕಾರ 1982ರಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಒಡೆಯರ್ ಕಾಲದ ಕರಾರು ಮುಂದುವರಿಸಲು ಮನವಿ ಮಾಡಿತ್ತು. ಆದರೆ, ನಮ್ಮ ರಾಜಕಾರಣಿಗಳೇ ಒಡೆಯರ್ ಮಾಡಿದ್ದ ಕರಾರು ಜೀವಂತವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜತೆಗೆ, ಪಾಂಡಿಚೇರಿ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಕಾವೇರಿ ನೀರಿನಲ್ಲಿ ಪಾಲು ಕೇಳುತ್ತಿದೆ. ಜತೆಗೆಮ ಬಿಳಿಗಿರಿರಂಗನಬೆಟ್ಟದಲ್ಲಿ ಹುಟ್ಟಿ ರಾಜ್ಯದ ಗಡಿ ಭಾಗದಲ್ಲಿ ಹರಿಯುವ ಮೋಯ ಎಂಬ ನದಿಯಿಂದಲೂ ತಮಿಳುನಾಡಿಗೆ 25 ಟಿಎಂಸಿ ನೀರು ಹರಿದು ಹೋಗುತ್ತಿದೆ. ಇದೆಲ್ಲವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಕಾವೇರಿ ನೀರನ್ನು ಉಳಿಸಿಕೊಳ್ಳಬೇಕಿದೆ. ಇಲ್ಲವಾದರೆ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಜನ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ವಿವರಿಸಿದರು.


ವಿಜಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿ, ನದಿ ನೀರನ್ನು ಹೀಗೇ ಹಂಚಿಕೆ ಮಾಡಿಕೊಳ್ಳಬೇಕೆಂದು ಸಂವಿಧಾನ ಹೇಳಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮೆಟ್ಟೂರು ಡ್ಯಾಂನಲ್ಲಿ 60 ಟಿಎಂಸಿ ನೀರಿನ ಸಂಗ್ರವಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 21 ಟಿಎಂಸಿ ನೀರಿದೆ. ಹಾಗಾಗಿ ನೀರು ನೀಡಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವ ಕೆಲಸ ವಕೀಲರದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಕೋ.ಪು.ಗುಣಶೇಖರ್, ಎಂ.ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net