

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
‘ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಹಣ ನೀಡದೆ ನಮ್ಮ ಸ್ವಂತ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಈ ಜಾಗದಲ್ಲಿ ಯಾರೂ ಓಡಾಡಬಾರದು’!
ಹಿಂದೂಪುರ-ಯಲಹಂಕದ ರಾಜ್ಯ ಹೆದ್ದಾರಿ 9 ರಲ್ಲಿ ಇಂಥದೊಂದು ಲಕ ರಾರಾಜಿಸುತ್ತಿದೆ. ಬಾಶೆಟ್ಟಿಹಳ್ಳಿ ಬಳಿ ಹೆದ್ದಾರಿಯಲ್ಲೇ ಬ್ಯಾರಿಕೇಡ್ ಇಟ್ಟು ಸೂಚನಾ ಲಕ ಅಳವಡಿಸಿರುವ ರೈತರು ಸರ್ಕಾರ ಭೂಮಿಗೆ ಪರಿಹಾರ ನೀಡಿಲ್ಲದ ಕಾರಣ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸದಂತೆ ಮನವಿ ಮಾಡಿ ಕೆಆರ್‌ಡಿಸಿಎಲ್ ಮಾನವನ್ನು ಹರಾಜು ಹಾಕಿದ್ದಾರೆ.
ಐದು ವರ್ಷಗಳ ಹಿಂದೆ ಹಿಂದೂಪುರ-ಯಲಹಂಕದ ರಾಜ್ಯ ಹೆದ್ದಾರಿ 9 ನಿರ್ಮಾಣಕ್ಕಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) ಭೂಮಿ ನೀಡಿದ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಅಲೆದು ಸುಸ್ತಾದ ಎಂಟು ರೈತರು ಈ ಮೂಲಕ ವಿನೂತನವಾಗಿ ಅಧಿಕಾರಿಗಳ ಕಣ್ತೆರೆಸಲು ಮುಂದಾಗಿದ್ದಾರೆ.
ರಾಜ್ಯ ಹೆದ್ದಾರಿ ವಿಸ್ತರಣೆಗಾಗಿ ಸರ್ಕಾರ 2015ರಲ್ಲಿ ಸರ್ವೇ ಮಾಡಿ ಅವಶ್ಯವಿರುವ ಕಡೆ 1 ಗುಂಟೆಗೆ 6 ಲಕ್ಷ ರೂ. ಪರಿಹಾರ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡು ಜಮೀನು ವಶಪಡಿಸಿಕೊಂಡಿದೆ. ಆದರೆ ಭೂಮಿ ಮಾಲೀಕರಿಗೆ 5 ವರ್ಷವಾದರೂ ಪರಿಹಾರ ಕೊಟ್ಟಿಲ್ಲ. ಈ ಮಾರ್ಗದಲ್ಲಿನ ಎರಡು ಟೋಲ್‌ಗಳಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೂ, ಬಾಶೆಟ್ಟಿಹಳ್ಳಿ ಸಮೀಪ ವಶಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಕಚೇರಿಗಳಿಗೆ ತೆರಳಿ ಮನವಿ ಮಾಡಿದರೂ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ರೈತರು ನೀಡಿದ್ದ ಭೂಮಿಗೆ ಬ್ಯಾರಿಕೇಡ್ ಹಾಕಿದ್ದಾರೆ.
ರಸ್ತೆ ಅರ್ಧಕ್ಕೆ ತಡೆ: 2015ರಿಂದ ಈವರೆಗೆ ಪರಿಹಾರ ಹಣಕ್ಕಾಗಿ ಇಲಾಖೆಯ ಕಚೇರಿಗೆ ಹೋಗಿ, ಮನವಿ ಮಾಡಿಕೊಂಡು ಬರಿಗೈಯಲ್ಲಿ ಮರಳುತ್ತಿದ್ದೇವೆ. ಅಧಿಕಾರಿಗಳು ಮಾತ್ರ ನಮ್ಮ ಮಾತನ್ನು ಕೇಳುವುದೇ ಇಲ್ಲ. ಸ್ವಾಧೀನಪಡಿಸಿಕೊಳ್ಳುವಾಗ ಮಾತ್ರ ಪ್ರತಿದಿನವೂ ಮನೆಗೆ ಸುತ್ತುತ್ತಿದ್ದರು. ಈಗ ನಮ್ಮ ಪರಿಹಾರ ಹಣ ಕೇಳಿದರೆ ಇಂದು, ನಾಳೆ ಎಂದು ಸಾಗಹಾಕುತ್ತಿದ್ದಾರೆ. ಇದರಿಂದ ಬೇಸತ್ತಿರುವ ನಾವು, ನಮ್ಮ ಹೊಲಗಳಿದ್ದ ರಸ್ತೆಯ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳು ಓಡಾಡದಂತೆ ಮಾಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ವಿಸ್ತರಣೆಗಾಗಿ ಕೆಆರ್‌ಡಿಸಿಎಲ್ 2015ರಲ್ಲಿ 16 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಅಂದಿನಿಂದ ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸೌಜನ್ಯದಿಂದ ಮಾತನಾಡುವುದಿಲ್ಲ. ಆದ್ದರಿಂದ, ಪರಿಹಾರ ಕೊಡುವಂತೆ ಆಗ್ರಹಿಸಿ ನಮ್ಮ ಜಾಗದಲ್ಲಿ ಬ್ಯಾರಿಕೇಡ್ ಹಾಕಿದ್ದೇವೆ. ಫಣೀಶ್, ಜಮೀನು ಕಳೆದುಕೊಂಡವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಣೆಗೆ ಜಮೀನು ವಶಪಡಿಸಿಕೊಂಡರೆ ಕಾಮಗಾರಿ ಆರಂಭಕ್ಕೂ ಮುನ್ನವೇ ಜಮೀನಿಗೆ ಪರಿಹಾರ ಹಣ ನೀಡುತ್ತದೆ. ಆದರೆ ಇಲ್ಲಿ ರಸ್ತೆ ಕಾಮಗಾರಿ ಮುಗಿದು, ಟೋಲ್ ಸಂಗ್ರಹಿಸುತ್ತಿದ್ದರೂ, ಪರಿಹಾರ ಕೊಟ್ಟಿಲ್ಲ. ಆನಂದ್ ಕುಮಾರ್, ಜಮೀನು ಕಳೆದುಕೊಂಡವರು ಈ ವಿಷಯವನ್ನು ಭೂಸ್ವಾಧೀನ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಪುಟ್ಟಪ್ಪ, ಕೆಆರ್‌ಡಿಸಿಎಲ್, ಎಇಇ