ರಾಜ್ಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಜು. 12 ರಂದು ಪ್ರತಿಭಟನೆ

ರಾಜ್ಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಜು. 12 ರಂದು ಪ್ರತಿಭಟನೆ
Published on

ಹಾಸನ: ಅರಕಲಗೂಡು ತಾಲೂಕಿನ ರಾಮನಾಥಪುರ - ಕೊಣನೂರು ಹೋಬಳಿಗಳ ಮಾರ್ಗದಲ್ಲಿ ಹೆಚ್ಚಾಗಿ ಅಪಘಾತವಾಗುತ್ತಿದ್ದು, ರಾಜ್ಯ ಹೆದ್ದಾರಿ ಅಧಿಕಾರಿಗಳು ಇನ್ನು ಒಂದು ವಾರದೊಳಗೆ ರಸ್ತೆ ಕಾಮಗಾರಿ ಪರಿಶೀಲಿಸಿ ಉತ್ತಮ ರಸ್ತೆ ಕಲ್ಪಿಸಬೇಕು. ಇಲ್ಲದಿದ್ದರೆ ಜುಲೈ 12 ರಂದು ಅರಕಲಗೂಡು ತಾಲೂಕಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಡಾ. ಎಸ್. ರಾಘವೇಂದ್ರಗೌಡ ಎಚ್ಚರಿಕೆ ನೀಡಿದರು.
ರಾಜ್ಯ ಹೆದ್ದಾರಿ 85ರಲ್ಲಿ ರಾಮನಾಥಪುರ ಹೋಬಳಿ ಹಾಗೂ ಕೊಣನೂರು ಹೋಬಳಿಯಲ್ಲಿ ಅರ್ಧಂಬರ್ಧ ರಸ್ತೆ ಕಾಮಗಾರಿ ಮಾಡಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ 350ಕ್ಕೂ ಹೆಚ್ಚು ಅಪಘಾತವಾಗಿದೆ. ಹಲವು ಮಂದಿ ಅಪಘಾತವಾದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ವಿಚಾರವಾಗಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಈಗಾಗಲೇ ಸಾಕಷ್ಟು ಬಾರಿ ಕೆಶಿಪ್3 ರಾಜ್ಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಪಘಾತವಾಗುತ್ತಿರುವ ರಸ್ತೆ ಪರಿಶೀಲನೆ ಮಾಡಿ ಜನರಿಗೆ ಉತ್ತಮ ರಸ್ತೆ ಕಲ್ಪಿಸಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂದರೆ ಇದೇ ತಿಂಗಳು 12ರಂದು ಅರಕಲಗೂಡು ತಾಲೂಕಿನ ತಾಲೂಕು ಕಚೇರಿ ಮುಂದೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ನೊಂದ ಕುಟುಂಬಗಳ ಪರವಾಗಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಈ ಹೋರಾಟಕ್ಕೂ ಗಮನ ಕೊಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಅರಕಲಗೂಡು ತಾಲೂಕು ಅಧ್ಯಕ್ಷ ರಮೇಶ್, ಯುವ ಘಟಕದ ಅಧ್ಯಕ್ಷ ಪ್ರಜ್ವಲ್ ಗೌಡ, ತಾಲೂಕು ಉಪಾಧ್ಯಕ್ಷ ಪ್ರಕಾಶ್, ಕೊಣನೂರು ಉಪಾಧ್ಯಕ್ಷ ಮೂರ್ತಿ, ಹೋರಾಟ ಸಮಿತಿ ಅಧ್ಯಕ್ಷ ದಿವಾಕರ್ ಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net